ಹಾಸನ: ಗಿರವಿ ಇಟ್ಟಿದ್ದ ಅಸಲಿ ಚಿನ್ನದ ಬದಲು ನಕಲಿ ಚಿನ್ನವನ್ನು ಇಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ಎಸ್ಬಿಐ ಶಾಖೆಯಲ್ಲಿ ನಡೆದಿದೆ.
ಬ್ಯಾಂಕಿನ ಹೊರ ಗುತ್ತಿಗೆ ನೌಕರ ಲವಾ ಬಿ.ಎನ್. ವಿರುದ್ದ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದ ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದೆ. ಈ ಸಂಬಂಧ ಎಸ್.ಬಿ.ಐ ಪ್ರಧಾನ ವ್ಯವಸ್ಥಾಪಕಿ ಅನುರಾಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಲವಾ ಬ್ಯಾಂಕಿನಲ್ಲಿ ಚಿನ್ನ ಗಿರವಿ ಇಟ್ಟಿದ್ದ ಗ್ರಾಹಕರ ಚಿನ್ನವನ್ನು ಎಗರಿಸಿದ್ದಾನೆ. ಕಪಾಟಿನಲ್ಲಿದ್ದ 30 ಪಾಕೆಟ್ ಚಿನ್ನದಲ್ಲಿ 18 ಪಾಕೆಟ್ ಚಿನ್ನವನ್ನು ಎಗರಿಸಿ ಅದರಲ್ಲಿ ನಕಲಿ ಚಿನ್ನವನ್ನು ತುಂಬಿಟ್ಟಿದ್ದ. ಎರಡು ಪಾಕೆಟ್ನಲ್ಲಿದ್ದ ಚಿನ್ನವನ್ನು ಸಂಪೂರ್ಣ ಎಗರಿಸಿ ಇತರೆ ಪಾಕೆಟ್ಗಳಲ್ಲಿ ಕೆಲವು ಚಿನ್ನವನ್ನು ಮಾತ್ರ ಕದ್ದಿದ್ದ.
2013ರಿಂದ ಬ್ಯಾಂಕಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲವಾ, ಬ್ಯಾಂಕ್ ಅಧಿಕಾರಿಗಳ ಜೊತೆ ವಿಶ್ವಾಸಗಳಿಸಿ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿ ಹೊತ್ತಿದ್ದ. ತನಗೆ ಬ್ಯಾಂಕಿನಲ್ಲಿ ಸಿಕ್ಕ ಸಲುಗೆ ಬಳಸಿ ಕೋಟಿ ಕೋಟಿ ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ್ದು, ಕೊಣನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಲವಾ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)