ಬಹುಭಾಷಾ ನಟ ಅರ್ಜುನ್ ಸರ್ಜಾ ನಟನೆಯ 160ನೇ ಸಿನಿಮಾ "ಬ್ಲಾಸ್ಟ್'. ಕಳೆದ ಮೇ. 28ರಂದು ತೆರೆಗೆ ಬಂದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಯುವ ನಿರ್ದೇಶಕ ಸುಭಾಷ್ ಕೆ. ರಾಜ್ ಆ್ಯಕ್ಷನ್&ಕಟ್ ಹೇಳಿದ್ದಾರೆ. ಮೂಲಗಳ ಪ್ರಕಾರ $18 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ, ವಿಶ್ವಾದ್ಯಂತ $80 ಕೋಟಿ ಕಲೆಕ್ಷನ್ ಮಾಡಿಕೊಂಡಿದೆ. ಆ ಮೂಲಕ ಈ ವರ್ಷದ ಅತ್ಯಂತ ಯಶಸ್ವಿ ತಮಿಳು ಸಿನಿಮಾ ಎನಿಸಿಕೊಂಡಿದೆ. ಹಾಗೇ ಥಿಯೇಟರ್ಗಳಲ್ಲಿ ಬಿಡುಗಡೆಯಾದ ಕೇವಲ 29 ದಿನಗಳಲ್ಲಿ ಅರ್ಥಾತ್ ಜೂನ್ 25ರಂದು "ಬ್ಲಾಸ್ಟ್' ಒಟಿಟಿಯಲ್ಲೂ ರಿಲೀಸ್ ಆಗಿದ್ದು, ಅಲ್ಲೂ ಕಳೆದ ಐದು ದಿನಗಳಿಂದ ಭಾರತದಾದ್ಯಂತ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್ನಲ್ಲಿದೆ. ಆ ಮೂಲಕ ಥಿಯೇಟರ್ನಲ್ಲಿ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ ಬಳಿಕ "ಬ್ಲಾಸ್ಟ್' ಒಟಿಟಿಯಲ್ಲಿ ವೀಕ್ಷಕರ ಮೇಲೂ ತನ್ನ ಮ್ಯಾಜಿಕ್ ಮುಂದುವರಿಸಿದೆ. &ಏಜೆನ್ಸೀಸ್
ಆ್ಯಕ್ಷನ್ ಥ್ರಿಲ್ಲರ್ ಹಂಗಾಮ
"ಬ್ಲಾಸ್ಟ್' ಒಬ್ಬ ಕರಾಟೆ ಶಿಕ್ಷಕನ ಕುರಿತ ಕಥೆಯಾಗಿದ್ದು, ಕರಾಟೆ ಕೋಚ್ ರಾಜಾರಾಮ್ ಪಾತ್ರದಲ್ಲಿ ಅರ್ಜುನ್ ಸರ್ಜಾ ನಟಿಸಿದ್ದಾರೆ. ಅವರ ಪತ್ನಿ ನೀಲವೇಣಿಯಾಗಿ ಅಭಿರಾಮಿ ಮತ್ತು ಪುತ್ರಿ ನೀಲಾ ಪಾತ್ರದಲ್ಲಿ ಪ್ರೀತಿ ಮುಕುಂದನ್ ಕಾಣಿಸಿಕೊಂಡಿದ್ದಾರೆ. ತಾವಾಯಿತು, ತಮ್ಮ ಕೆಲಸವಾಯಿತು ಅಂತ ತಮ್ಮ ಪಾಡಿಗಿದ್ದ ರಾಜಾರಾಮ್ ಮತ್ತು ಕುಟುಂಬ ದೊಡ್ಡ ಬಿಜಿನೆಸ್ ಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿ, ಅವರಿಂದ ಹೇಗೆ ಬಚಾವಾಗುತ್ತಾರೆ ಎಂಬುದರ ಸುತ್ತ "ಬ್ಲಾಸ್ಟ್' ಕಥೆ ಸಾಗುತ್ತದೆ. ಪ್ರತಿ ಹಂತದಲ್ಲೂ ಬರುವ ಟ್ವಿಸ್ಟ್ಗಳು, ಆ್ಯಕ್ಷನ್ ದೃಶ್ಯಗಳು 143 ನಿಮಿಷಗಳ ಚಿತ್ರವನ್ನು ಎಲ್ಲೂ ಬೋರ್ ಆಗದಂತೆ ನೋಡಿಸಿಕೊಂಡು ಹೋಗುತ್ತವೆ. ಹಾಗೇ ಸಮರಕಲಾ ಪ್ರವಿಣರಾದ ಅರ್ಜುನ್ ಸರ್ಜಾ ಕೂಡ ಲೀಲಾಜಾಲವಾಗಿ ನಟಿಸಿದ್ದು, ಅಭಿರಾಮಿ, ಪ್ರೀತಿ, ಜಾನ್ ಕೊಕ್ಕೇನ್, ವಿವೇಕ್ ಪ್ರಸನ್ನ ಕೂಡ ಗಮನ ಸೆಳೆಯುತ್ತಾರೆ.
ಸಣ್ಣ ಚಿತ್ರಗಳ ಸಂಭ್ರಮ
"ಬ್ಲಾಸ್ಟ್' ಮಾತ್ರವಲ್ಲ ಈ ವರ್ಷ ಕಾಲಿವುಡ್ನಲ್ಲಿ ಸಣ್ಣ ಬಜೆಟ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. 2026ರಲ್ಲಿ ಮೊದಲ ಆರು ತಿಂಗಳಲ್ಲಿ ರಿಲೀಸ್ ಆಗಿರುವ 95 ತಮಿಳು ಚಿತ್ರಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿಕೊಂಡ ಟಾಪ್ 10 ಚಿತ್ರಗಳಲ್ಲಿ ಐದು ಸಣ್ಣ ಹಾಗೂ ಮಧ್ಯಮ ಬಜೆಟ್ ಚಿತ್ರಗಳೂ ಸ್ಥಾನ ಪಡೆದಿವೆ. "ಬ್ಲಾಸ್ಟ್' ಜತೆಗೆ "ತಾಯಿ ಕಿಳವಿ' (₹78 ಕೋಟಿ), "ಯೂಥ್' (₹75 ಕೋಟಿ), "ತಲೈವರ್ ತಂಬಿ ತಲೈಮೈಯಿಲ್' (₹40 ಕೋಟಿ), "ವಿತ್ ಲವ್' (₹39 ಕೋಟಿ) ಟಾಪ್ 10ರಲ್ಲಿವೆ.