84ಲಕ್ಷ ಜೀವರಾಶಿಗಳಿವೆ ನಿಜ. ಆದರೆ ಅವೆಲ್ಲವೂ ಮಹಾದೇವನಿಗೆ ಶಿವಾಲಯಗಳಾಗಲಾರವು. ಯಾಕೆಂದರೆ ‘ಮಮಕಾಯ ಭಕ್ತಕಾಯ’ ಎಂಬಲ್ಲಿ ‘ಭಕ್ತಿ’ವುಳ್ಳ ಕಾಯವೇ ದೇವನ ಕಾಯವೆನಿಸುತ್ತದೆ. ‘ಮದ್ಭಕ್ತಃ’ ಎಂಬಲ್ಲಿ ದೇವನ ಕರುಣಿಗೆ ಪಾತ್ರನಾದವನೆಂದರ್ಥ. ‘ಭಕ್ತನಂಗಳವೇ ವಾರಣಾಸಿ’ ಎಂದು ಬಣ್ಣಿಸುವಲ್ಲಿ ಭಕ್ತನು ದೇವನಿಗೆ ಶಿವಾಲಯವಾಗಿರುವನೆಂದೇ ಅರ್ಥ. ದೇವನನ್ನು ಗುರುತಿಸಲಾರದೆ ಕೇವಲ ಹೆಣ್ಣು, ಹೊನ್ನು, ಮಣ್ಣುಗಳ ಸಾವಿರ ಸಾವಿರ ಸುಖದ ಆಯಾಮಗಳನ್ನು ಸಂಗ್ರಹಿಸಿ, ದೇಹದಲ್ಲಿ ವಿಷಯವಾಸನೆಗಳನ್ನು ತುಂಬಿಕೊಂಡು ಅಜ್ಞಾನ, ಮಾಯೆ, ಮೋಹದಲ್ಲಿ ಮುಳುಗಿ ದೇಹದ ಗುಣ ಧರ್ಮ ಸ್ವಭಾವಗಳನ್ನು ವೈಭವೀಕರಿಸಿ ಮನದ ಕುದುರೆ ಏರಿ, ಭವದತ್ತ ಮುಖವಾಗಿ ಹೋಗುತ್ತಿರುವ ಈ ಆಲಯ (ದೇಹ) ಶಿವಾಲಯವಾಗಬಲ್ಲುದೇ?
ಶ್ರೀ ಸಿದ್ಧರಾಮೇಶ್ವರ - ಶ್ರೀ ಅಲ್ಲಮಪ್ರಭುಗಳ ಸಂವಾದ ರೂಪದಲ್ಲಿ ಈ ವಿವರ ನೋಡೋಣ.
ಸಿದ್ಧರಾಮೇಶ್ವರರು: 84ಲಕ್ಷ ಶಿವಾಲಯಗಳ ನೀವು ಮಾಡಿ ಅವುಗಳಲ್ಲಿ ನೀವು ಒಳಗಿಪ್ಪುದ ಕಂಡು. ನಾನು ಈ ಗುಡಿ ಗೋಪುರ ಶಿವಾಲಯಗಳನ್ನು ಕಟ್ಟಿದೆ. ಕಪಿಲಸಿದ್ದ ಮಲ್ಲಿನಾಥಯ್ಯ ನನಗೆ ಬೇರೆ ಸ್ವತಂತ್ರವುಂಟೇ? ನೀವು ಮಾಡಿದ್ದನ್ನು ನೋಡಿ ನಾನು ಮಾಡಿದೆ ಅಷ್ಟೇ. ನನ್ನದೇನೂ ತಪ್ಪಿಲ್ಲ ಎಂಬರ್ಥದಲ್ಲಿ ಸಿದ್ಧಾರಮೇಶ್ವರರ ಪ್ರಶ್ನೆ ಇದೆ.
ಪ್ರಭುದೇವರ ಉತ್ತರ: ಸಿದ್ಧರಾಮಾ? ನೀನು ಬಾಲಕನಾಗಿದ್ದಾಗ ಶ್ರೀಶೈಲ ಕಮರಿ ಮೇಲಿಂದ ಜಿಗಿದು ಆ ಮಲ್ಲಿಕಾರ್ಜುನನ್ನು ಪ್ರತ್ಯಕ್ಷೀಕರಿಸಿಕೊಂಡಾಗ ಆತ ನಿನಗೆ ಕೊಟ್ಟ ‘ವರ’ ಸೊನ್ನಲಾಪೂರಕ್ಕೆ ನಾನೇ ಬಂದು ಲಿಂಗರೂಪದಲ್ಲಿ ಗೋಚರಿಸುವೆ ಎಂದು ಹಾಗೂ ನೀನಿದ್ದಲ್ಲಿ ನಾ ಇರುವೆ ಎಂಬ ಅಭಯ ವಚನ. ಆ ಲಿಂಗವನ್ನು ನಡುನಾಡಿಗೆ ತಂದವ ನಾನೆಂಬ ಅಹಂ ಭ್ರಮೆ ಇದೆ ನಿನಗೆ. ಆದರೆ ತಿಳಿದುಕೊಂಡಿರು, ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು ಶಿವಾಲಯ ಆಗಲಾರವು. ದೇಹೋದೇವಾಲಯ ಆಗುವದು ಅಷ್ಟು ಸುಲಭವಲ್ಲ. ತನುವಿಕಾರ, ಮನವಿಕಾರ, ಇಂದ್ರಿಯವಿಕಾರಗಳನ್ನೆಲ್ಲ, ಕಳೆದೊಗೆದಾಗ (ಲಿಂಗಗುಣಗಳನ್ನು ಅಳವಡಿಸಿಕೊಂಡಾಗ) ಲಿಂಗದ ಭಾವನೆ ಭದ್ರಗೊಂಡಾಗ ಮಾತ್ರವೇ ಶಿವಾಲಯ, ಇಲ್ಲವಾದರೆ ಪ್ರಳಯಾಲಯ ತಪ್ಪಿದ್ದಲ್ಲ.