ಸಾಗರ: ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಸಾಗರದಲ್ಲಿ ಡಿ.6ರಂದು ಬೆಳೆಗಾರರ ಸಮಾವೇಶ ಆಯೋಜಿಸಿದ್ದು, ಪ್ರತಿಯೊಬ್ಬರೂ ಭಾಗವಹಿಸಬೇಕು. ಸಮಾವೇಶ ನಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಬೇಕು ಎಂದು ಹಿರಿಯ ಸಹಕಾರಿ ಎಚ್.ಎಸ್.ಮಂಜಪ್ಪ ಹೊಸಬಾಳೆ ಹೇಳಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ನಂತರದಲ್ಲಿ ದೊಡ್ಡ ಸಮಾವೇಶ ಆಯೋಜಿಸಲಾಗುತ್ತಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಆಗಮಿಸುತ್ತಿರುವ ಕಾರ್ಯಕ್ರಮಕ್ಕೆ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಅಡಕೆ ಬೆಳೆ ಕುರಿತು ಒಂದು ವಿಚಾರಗೋಷ್ಠಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅಡಕೆ ಬೆಳೆಗಾರರ ಸಂಘದ ಹಿಂದಿನ ಐವರು ಅಧ್ಯಕ್ಷರಿಗೆ ಸನ್ಮಾನ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸುವರು. ಸಂಜೆ ಸಮಾರೋಪ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಳ್ಳುವರು ಎಂದರು.
ಅಡಕೆ ಪೂಜ್ಯನೀಯ ಜತೆಗೆ ಔಷಧೀಯ ಗುಣ ಹೊಂದಿರುವ ವಸ್ತು ಎನ್ನುವುದನ್ನು ಕೇಂದ್ರಕ್ಕೆ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಚಾಲ್ತಿಯಲ್ಲಿದೆ. ಈಗಾಗಲೆ ರಾಜ್ಯದಲ್ಲಿ ಅಡಕೆ ಕುರಿತು ಸಾಕಷ್ಟು ಸಂಶೋಧನೆ ನಡೆದಿದ್ದು, ಸಂಶೋಧನಾ ವರದಿ ನಮ್ಮ ಪರವಾಗಿ ಬಂದಿದೆ. ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದಿಂದ ಅಡಕೆ ಕುರಿತು ಸಂಶೋಧನೆ ನಡೆಸಲು ತಾಂತ್ರಿಕ ಸಮಿತಿ ರಚನೆ ಮಾಡಲು ಒತ್ತಡ ತರಲಾಗಿದೆ. ಅಡಕೆ ಜತೆ ತಂಬಾಕು ಸೇರಿಸಿ ಗುಟ್ಖಾ ರೂಪದಲ್ಲಿ ತಿಂದರೆ ಹಾನಿಯಾಗಬಹುದು. ಆದರೆ ಕೇವಲ ಅಡಕೆ ಸೇವನೆ ಂದಿಗೂ ಹಾನಿಕಾರಕವಲ್ಲ. ಇತರೆ ಕೃಷಿ ಉತ್ಪನ್ನಗಳಿಗೆ ಹೋಲಿಕೆ ಮಾಡಿದರೆ ಅಡಕೆಗೆ ಸಮಾಧಾಕರ ಬೆಲೆ ಇದೆ. ಇದನ್ನು ಉಳಿಸಿಕೊಳ್ಳಬೇಕು. ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕೇಂದ್ರಕ್ಕೆ ಬೆಳೆಗಾರರ ಶಕ್ತಿ ತೋರಿಸಬೇಕು ಎಂದು ಹೇಳಿದರು.
50 ಸಾವಿರ ಜನ ಸೇರಿಸುವ ಗುರಿ: ಸಮಾವೇಶಕ್ಕೆ ಕನಿಷ್ಠ 50 ಸಾವಿರ ಅಡಕೆ ಬೆಳೆಗಾರರನ್ನು ಸೇರಿಸುವ ಉದ್ದೇಶವಿದೆ. ಡಬ್ಲುೃಎಚ್‌ಒ ಅಡಕೆ ಬಗ್ಗೆ ಅಪಸ್ವರ ಎತ್ತುತ್ತಿರುವ ಈ ಹೊತ್ತಿನಲ್ಲಿ ಕೇಂದ್ರ ಸಚಿವರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಅವರಿಗೆ ಅಡಕೆ ಕುರಿತು ಅಗತ್ಯ ಮಾಹಿತಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಹೇಳಿದರು. ಸಮಾವೇಶದಲ್ಲಿ ಅಡಕೆ ಉತ್ಪನ್ನಗಳ ಹೊಸ ಸಾಧ್ಯತೆಗಳ ಬಗ್ಗೆಯೂ ಚಿಂಥನ-ಮಂಥನ ನಡೆಸಬೇಕಾಗಿದೆ. ಅಲ್ಲದೆ, ಅಡಕೆಗೆ ಸಾಕಷ್ಟು ರೋಗಗಳು ಬಾಧಿಸುತ್ತಿವೆ. ಪರಿಹಾರಗಳ ಬಗ್ಗೆ ತಜ್ಞರೊಂದಿಗೆ ಮಾತುಕತೆ ನಡೆಸಲಾಗುವುದು. ವನ್ಯಜೀವಿಗಳಿಂದ ಅಡಕೆ ಬೆಳೆ ಹಾನಿಯಾಗುತ್ತಿದ್ದು, ಈ ಕುರಿತು ಕೇಂದ್ರದಲ್ಲಿ ಕಾಯ್ದೆ ತಿದ್ದುಪಡಿಯಾಗಬೇಕು. ಈ ಎಲ್ಲ ವಿಚಾರಗಳನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎದುರು ಇಡಲಾಗುವುದು ಎಂದರು.
ಸಮಾವೇಶದ ಸಹ ಸಂಚಾಲಕ ಮಲ್ಲಿಕಾರ್ಜುನ ಹಕ್ರೆ. ಆರ್.ಎಸ್.ಗಿರಿ, ಬಿ.ಎ.ಇಂದೂಧರ ಬೇಸೂರು, ಕೆ.ಸಿ.ದೇವಪ್ಪ, ವಿಜಯೇಂದ್ರ, ರಾಜೇಂದ್ರ, ಅನಿಲಕುಮಾರ್ ಇತರರಿದ್ದರು.