ನ್ಯೂಸ್

ನೀವು iPhone​ ಬಳಸ್ತಿದ್ದೀರಾ? ಮೋಸ ಹೋಗ್ತಿದ್ದೀರಿ ಎಚ್ಚರ! ಶಾಕಿಂಗ್​ ಸತ್ಯ ಬಿಚ್ಚಿಟ್ಟ ಬೆಂಗಳೂರು ಮಹಿಳೆ

iPhone : ಇಂದು ಬಹುತೇಕ ಮಂದಿ ಆನ್​ಲೈನ್​ ಶಾಪಿಂಗ್​ಗೆ ಅಡಿಕ್ಟ್​ ಆಗಿದ್ದಾರೆ. ಮೊದಲೆಲ್ಲ ಬಟ್ಟೆ ಹಾಗೂ ಯಾವುದಾದರೂ ವಸ್ತುಗಳನ್ನು ಆನ್​ಲೈನ್​ನಲ್ಲಿ ಖರೀದಿ ಮಾಡುತ್ತಿದ್ದರು. ಆದರೆ, ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಸಹ ಆನ್​ಲೈನ್​ನಲ್ಲಿ ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಇಂದು ಕೆಲವೇ ನಿಮಿಷಗಳಲ್ಲಿ ಡೆಲಿವರಿ ಮಾಡುವ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಬಂದಿವೆ. ಜೆಪ್ಟೋ, ಬ್ಲಿಂಕ್ ಇಟ್​ ಮತ್ತು ಫ್ಲಿಫ್​ಕಾರ್ಟ್​ನಂತಹ ಇ-ಕಾಮರ್ಸ್​ ಕಂಪನಿಗಳು ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಮನೆಗೆ ತಲುಪಿಸುತ್ತವೆ.

ಇದೀಗ ಬೆಂಗಳೂರು ಮೂಲದ ಪೂಜಾ ಚಬ್ಡಾ ಎಂಬ ಮಹಿಳೆ, ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಯುತ್ತಿರುವ ವಂಚನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಐಫೋನ್ ಬಳಕೆದಾರರು ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವಿನ ಬೆಲೆಗಳಲ್ಲಿನ ವ್ಯತ್ಯಾಸವನ್ನು ಪೂಜಾ ಅವರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಪೂಜಾ ನಡೆಸಿದ ಒಂದು ಸಣ್ಣ ಪ್ರಯೋಗದಿಂದ ಈ ವಂಚನೆ ಬಯಲಾಗಿದೆ. ಒಂದೇ ವಸ್ತುವಿಗೆ ವಿಭಿನ್ನ ಬೆಲೆಗಳಿರುವ ವಿಷಯ ಬೆಳಕಿಗೆ ಬಂದಿದೆ. ಪೂಜಾ ಅವರು ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಎರಡನ್ನೂ ಬಳಸಿಕೊಂಡು ಜೆಪ್ಟೋ ಅಪ್ಲಿಕೇಶನ್‌ನಲ್ಲಿ ಬೆಲೆಗಳನ್ನು ಹೋಲಿಕೆ ಮಾಡಿ ನೋಡಿದ್ದಾರೆ. ಆಂಡ್ರಾಯ್ಡ್ ಫೋನ್‌ನಲ್ಲಿ 500ಗ್ರಾಂ ದ್ರಾಕ್ಷಿಯ ಬೆಲೆ 65 ರೂಪಾಯಿ ಇದ್ದರೆ, ಐಫೋನ್‌ನಲ್ಲಿ ಅದೇ ದ್ರಾಕ್ಷಿಯ ಬೆಲೆ 146 ರೂಪಾಯಿ ಇದೆ. ಅಂದರೆ, ಬೆಲೆಯಲ್ಲಿ ಎರಡು ಪಟ್ಟು ಹೆಚ್ಚು ವ್ಯತ್ಯಾಸವಿದೆ. ಎಲ್ಲೋ ಮಿಸ್ಟೇಕ್​ ಆಗಿರಬಹುದು ಅಂತ ಅಂದುಕೊಂಡರೆ ಅದು ನಮ್ಮ ತಪ್ಪು. ಏಕೆಂದರೆ, ಕ್ಯಾಪ್ಸಿಕಂ ಬೆಲೆಯಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ. ಆಂಡ್ರಾಯ್ಡ್ ಫೋನ್‌ನಲ್ಲಿ ಕ್ಯಾಪ್ಸಿಕಂ ಬೆಲೆ 37 ರೂ. ಇದ್ದರೆ, ಐಫೋನ್‌ನಲ್ಲಿ 69 ರೂಪಾಯಿ ಇದೆ.

ಭಾರಿ ಬೆಲೆ ವ್ಯತ್ಯಾಸದಿಂದ ಆಘಾತಕ್ಕೊಳಗಾದ ಪೂಜಾ ಚಬ್ಡಾ, ಇದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಐಫೋನ್ ಬಳಕೆದಾರರು ತಾವು ಪಾವತಿಸುವ ಬಿಲ್‌ಗಳನ್ನು ಒಮ್ಮೆ ಪರಿಶೀಲಿಸಬೇಕೆಂದು ಅವರು ತಮ್ಮ ಫಾಲೋವರ್ಸ್​ಗೆ ಪೂಜಾ ಎಚ್ಚರಿಕೆ ನೀಡಿದ್ದಾರೆ. ಅನೇಕ ನೆಟ್ಟಿಗರು ಪೂಜಾ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಐಫೋನ್ ಬಳಕೆದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಐಫೋನ್​ ಬಳಸುವವರು ಆರ್ಥಿಕವಾಗಿ ಸದೃಢರಾಗಿರುತ್ತಾರೆಂದು ತಿಳಿದು ಇ ಕಾಮರ್ಸ್​ ಕಂಪನಿಗಳು ಅವರಿಂದ ಸುಲಿಗೆ ಮಾಡುತ್ತಿವೆ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ.

ನೀವು ಐಫೋನ್ ಖರೀದಿಸಲು ಸಾಧ್ಯವಾದಾಗ, ಇಂತಹದ್ದಕ್ಕೆ ಹೆಚ್ಚು ಹಣ ಪಾವತಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಈ ಬೆಲೆ ವ್ಯತ್ಯಾಸವು ಐಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಪ್ರೀಮಿಯಂ ಫೋನ್‌ಗಳನ್ನು ಬಳಸುವವರಿಗೆ ಬೆಲೆಗಳು, ಲಭ್ಯತೆ ಮತ್ತು ವಿತರಣಾ ಸಮಯಗಳಲ್ಲಿಯೂ ವ್ಯತ್ಯಾಸಗಳಿರಬಹುದು ಎಂದು ಮತ್ತೊಬ್ಬರು ಅನುಮಾನಿಸಿದ್ದಾರೆ. ಜೆಪ್ಟೋ ಆಡಳಿತ ಮಂಡಳಿಯು ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ವಿವರಣೆ ಕೇಳಿದರೂ ಮೌನವಾಗಿದೆ. ಹೀಗಾಗಿ ಗ್ರಾಹಕರಲ್ಲಿ ಇದು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. (ಏಜೆನ್ಸೀಸ್​)