ನ್ಯೂಸ್

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಫೆೇಲಾದ್ರಾ ಚಿಂತೆ ಬಿಡಿ, ಮತ್ತೆ ಕ್ಲಾಸ್‌ಗೆ ಹೋಗಲು ರೆಡಿಯಾಗಿ!

ಎನ್.ಎಲ್. ಶಿವಮಾದು

ಬೆಂಗಳೂರು ರಾಜ್ಯದಲ್ಲಿನ ಸಾಕ್ಷರತಾ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲಾ- ಕಾಲೇಜಿಗೆ ದಾಖಲಾಗಿ ಪಾಠ ಕೇಳುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಿದೆ.

ಆಂಧ್ರ ಪ್ರದೇಶದಲ್ಲಿರುವ ಇಂತಹದ್ದೊಂದು ನಿಯಮವನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜಾರಿಗೊಳಿಸುತ್ತಿದೆ.

ರಾಜ್ಯದಲ್ಲಿ ಶಾಲಾ ಶಿಕ್ಷಣ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣದಲ್ಲಿನ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ವ್ಯತ್ಯಾಸವಿದೆ. ಈ ಸಂಖ್ಯೆಯನ್ನು ಸರಿದೂಗಿರುವ ಮತ್ತು ಉನ್ನತ ಶಿಕ್ಷಣ ಪಡೆಯುವವರು ಸಂಖ್ಯೆಯನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಹೊಸ ನಿಯಮ ರೂಪಿಸಲಾಗಿದೆ ಎಂದು ಇಲಾಖೆ ಅಧೀನ ಕಾರ್ಯದರ್ಶಿ (ಪ್ರೌಢ ಶಿಕ್ಷಣ) ಆದೇಶ ಹೊರಡಿಸಿದ್ದಾರೆ.

ಹೊಸ ನಿಯಮವೇನು?

2023-24ನೇ ಸಾಲಿನಲ್ಲಿ 10 ಮತ್ತು 12ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಯಾ ತರಗತಿಗಳಿಗೆ ಪ್ರವೇಶ ಒದಗಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ, ಸರ್ಕಾರ ಅನುಮತಿ ನೀಡಿದೆ. ಜಿಇಆರ್ ಸುಧಾರಿಸಲು ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.

ಪ್ತತಿ ವರ್ಷ 8.21 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಇದರಲ್ಲಿ ಶೇ.09 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಪೂರಕ ಪರೀಕ್ಷೆಗೆ ಹಾಜರಾಗುವ ಸಂಖ್ಯೆಯಲ್ಲಿ ಶೇ.45ರಷ್ಟು ಉತ್ತೀರ್ಣರಾಗುತ್ತಾರೆ. ಗ್ರಾಮೀಣ/ನಗರ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗಳಲ್ಲಿ ಶೇ.40ರಿಂದ 45ರ ನಡುವೆ ಇರುತ್ತದೆ. ಇಂತಹ ವಿದ್ಯಾರ್ಥಿಗಳ ಶಿಕ್ಷಣ ಇಲ್ಲಿಗೇ ಮೊಟಕುಗೊಳ್ಳಲಿದೆ.

ಈ ವಿದ್ಯಾರ್ಥಿಗಳು ಪ್ರತ್ಯೇಕ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ. ಆದ್ದರಿಂದ ಡ್ರಾಪ್‌ಔಟ್ (ಶಾಲೆ ಬಿಡುವರರ) ಅನ್ನು ತಪ್ಪಿಸಬೇಕಾದರೆ, ಶೈಕ್ಷಣಿಕವಾಗಿ ಅವಕಾಶವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕಾರ್ಯತಂತ್ರ ರೂಪಿಸಬೇಕಾಗಿದೆ.

ವಿದ್ಯಾರ್ಥಿಗೆ ಏನೆಲ್ಲ ಅನುಕೂಲಗಳಿವೆ?

- ರೆಗ್ಯುಲರ್ ಶಾಲಾವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ/ದ್ವಿತೀಯ ಪಿಯುಸಿ ಪರೀಕ್ಷೆ-1,2 ಮತ್ತು 3ರಲ್ಲಿ ಅನುತ್ತೀರ್ಣರಾದಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಅಭ್ಯರ್ಥಿಯಾಗಿ ಸರ್ಕಾರಿ ಶಾಲೆ/ಕಾಲೇಜಿನಲ್ಲಿ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮರು ದಾಖಲಾತಿಗೆ ಅವಕಾಶ ಕಲ್ಪಿಸಬೇಕು.

- ಮರು ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಇತರೆ ವಿದ್ಯಾರ್ಥಿಗಳಂತೆ ಶಾಲೆ/ಕಾಲೇಜಿನಲ್ಲಿ ಪೂರ್ಣಾವಧಿ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ಎಲ್ಲ ವಿಷಯದ ತರಗತಿಗಳಲ್ಲಿ ಪೂರ್ಣಾವಧಿ ಹಾಜರಾಗಿ ಪರೀಕ್ಷೆ ಬರೆಯಬೇಕು.

- ಶಾಲೆಗಳಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ, ಪಠ್ಯಪುಸ್ತಕಗಳು, ಶೂ ಮತ್ತು ಸಾಕ್ಸ್, ಮಧ್ಯಾಹ್ನದ ಬಿಸಿಯೂಟ ಸೇರಿ ಎಲ್ಲ ಪ್ರೋತ್ಸಾಹ ಸೌಲಭ್ಯಗಳನ್ನು ಈ ಮಕ್ಕಳಿಗೂ ವಿಸ್ತರಿಸಬೇಕು. ಶುಲ್ಕ ಪಾವತಿಯಲ್ಲಿ ವಿನಾಯಿತಿ ನೀಡಬೇಕು.

- ಇಂತಹ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲು ಧನಾತ್ಮಕ ಮನೋಭಾವನೆ ಉಂಟಾಗುವಂತೆ ಕ್ರಮ ವಹಿಸುವುದು

ತರಗತಿಗಳಿಗೆ ಹಾಜರಾಗಿ ವಿದ್ಯಾರ್ಥಿಗಳ ಆಯ್ಕೆ

ಮರು ದಾಖಲಾತಿ ಪಡೆದ ವಿದ್ಯಾರ್ಥಿಯು ತಾವು ಅನುತ್ತೀರ್ಣರಾಗಿರುವ ವಿಷಯಗಳ ತರಗತಿಗಳಿಗೆ ಮಾತ್ರ ಹಾಜರಾಗಬಹುದು ಅಥವಾ ಎಲ್ಲ ವಿಷಯಗಳಿಗೂ ಹಾಜರಾಗಬಹುದು. ಇದು ವಿದ್ಯಾರ್ಥಿಯ ಆಸಕ್ತಿಗೆ ಬಿಟ್ಟ ವಿಷಯವಾಗಿದೆ. ಒಂದು ವೇಳೆ ಎಲ್ಲ ವಿಷಯಗಳನ್ನು ಮತ್ತೊಮ್ಮೆ ಕಲಿತು ಪರೀಕ್ಷೆಗೆ ಹಾಜರಾಗಲು ಕೂಡ ವಿದ್ಯಾರ್ಥಿಗೆ ಅವಕಾಶವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಜಿಇಆರ್ ಪ್ರಮಾಣ:

ತರಗತಿ ಶೇಕಡಾವಾರು ಪ್ರಮಾಣ

9, 10ನೇ ತರಗತಿ ಶೇ.95.38

10, 11ನೇ ತರಗತಿ ಶೇ.73.79

11, 12ನೇ ತರಗತಿ ಶೇ.56.6

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳು ಬಹುತೇಕ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ವಿದ್ಯಾರ್ಥಿಗಳು ಡ್ರಾಪ್‌ಔಟ್ ಆಗಬಾರದು ಎಂಬ ಉದ್ದೇಶದಿಂದ ಮರು ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.

- ರಿತೇಶ್‌ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆ ಪ್ರಧಾನ ಕಾರ್ಯದರ್ಶಿ