ಬೆಂಗಳೂರು ದೇಶದಲ್ಲಿ ನೂರಾರು ವರ್ಷಗಳಿನಿಂದಲೂ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಶ್ರೇಷ್ಠತೆಯನ್ನು ಕಾಪಾಡಿಕೊಂಡಿರುವ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಹಿಂದಿಕ್ಕಿ ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಖಾಸಗಿ ವಿಶ್ವವಿದ್ಯಾಲಯಗಳು ಎನ್‌ಐಆರ್‌ಎಫ್ ರ‌್ಯಾಂಕ್ ಪಡೆದಿರುವುದನ್ನು ಗಮನಿಸಿದರೆ, ನಿಜವಾಗಿಯೂ ಖಾಸಗಿ ವಿವಿಗಳು ಸುಧಾರಣೆಯಾಗಿವೆಯೇ ಹಾಗೂ ಅರ್ಹರೇ ಎಂಬ ಅನುಮಾನವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವ್ಯಕ್ತಪಡಿಸಿದ್ದಾರೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನೃಪತುಂಗ ವಿಶ್ವವಿದ್ಯಾಲಯದ ಮೊದಲನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಅತಿ ಹೆಚ್ಚಿನ ಜನಸಂಖ್ಯೆ, ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ದೊಡ್ಡದಿದೆ. ಕೈಗೆಟಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿದೆಯೇ ಎಂಬ ಮನಸ್ಥಿತಿಯಲ್ಲಿ ಜನರಿದ್ದಾರೆ.
ಇಂತಹ ಸಮಯದಲ್ಲಿ ಗುಣಾತ್ಮಕ ಶಿಕ್ಷಣದ ವಿಷಯದಲ್ಲಿ ಖಾಸಗಿ ವಿವಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಎದುರು ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಸ್ಥಿತ್ವದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದರು.
ಇತ್ತೀಚಿನ ಎನ್‌ಐಆರ್‌ಎ್ ರ‌್ಯಾಂಕಿಂಗ್‌ನಲ್ಲಿ ಕೊರೊನಾ ಬಳಿಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಐಐಎಸ್ಸಿ, ಐಐಟಿ, ಎನ್‌ಐಟಿಗಳ ರ‌್ಯಾಂಕ್ ಕುಸಿತವಾಗಿದೆ. ಆಶ್ಚರ್ಯಕರ ರೀತಿಯಲ್ಲಿ ಖಾಸಗಿ ವಿವಿಗಳ ಹೆಸರು ಕೇಳಿಬಂದಿದೆ. ಇದು ಹೇಗೆ ಸಾಧ್ಯವಾಯಿತು. ರ‌್ಯಾಂಕಿಂಗ್ ನೀಡುವಲ್ಲಿ ಮೋಸವಾಗುತ್ತಿದೆಯೇ ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ಹೇಳಿದರು.
ಅನುದಾನ ಹೆಚ್ಚಳವಾಗಲಿ:
ಲಿತಾಂಶ ಉತ್ತಮವಾಗಿದ್ದರೂ ಬೋಧನಾ ಗುಣಮಟ್ಟ ಕಾಪಾಡಲು ಬೋಧಕ ಸಿಬ್ಬಂದಿ ಕೊರತೆ ಇದೆ. ರಾಜ್ಯದ ವಿವಿಗಳು ಅನುದಾನ, ಶೈಕ್ಷಣಿಕ ಮತ್ತು ಸಂಶೋಧನೆಗಳಿಗೆ ಸವಲತ್ತುಗಳ ಸಮಸ್ಯೆ ಎದುರಿಸುತ್ತಿವೆ. ಈ ವಿಚಾರವಾಗಿ ಗಂಭೀರವಾಗಿ ಆಲೋಚಿಸುವ ಜತೆಗೆ ಕೇಂದ್ರ ಸರ್ಕಾರ. ಯುಜಿಸಿ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಿ ಸಂಸ್ಥೆಗಳ ಶ್ರೇಷ್ಠತೆ ಕಾಪಾಡಬೇಕಿದೆ ಎಂದರು.