ಏಷಿಯಾ ಮತ್ತು ಯೂರೋಪ್ನಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ವಿಶ್ವಾದ್ಯಂತ ಆರ್ಥಿಕತೆ ಡೋಲಾಯಮಾನವಾಗಿದೆ. ಭಾರತದ ಮೇಲೂ ರಷಿಯಾ - ಯೂಕ್ರೇನ್ ಹಾಗೂ ಇರಾನ್ - ಇಸ್ರೇಲ್, ಅಮೆರಿಕ ನಡುವಿನ ಯುದ್ಧಗಳು ಪರಿಣಾಮ ಬೀರುತ್ತಿವೆ. ಇಂಧನ ಸೇರಿ ಹಲವು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಸಾಮಾನ್ಯ ಜನರ ಮೇಲಿನ ಹೊರೆ ಹೆಚ್ಚಿದೆ. ಹೀಗಾಗಿ ಕಾಸ್ಟ್ ಕಟಿಂಗ್ ಮಾಡೋಣವೆಂದು ಇತ್ತಿಚೆಗಷ್ಟೆ ಹಿರಿಯ ನಟ, ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಇಡೀ ಭಾರತೀಯ ಚಿತ್ರರಂಗಕ್ಕೆ ಕರೆ ನೀಡಿದ್ದರು. "ಶೂಟಿಂಗ್ಗೆ ವಿದೇಶಗಳಿಗೆ ಹೋಗುವುದನ್ನು, ವಿನಾ ಕಾರಣ ಸಿನಿಮಾ ಬಿಡುಗಡೆ ತಡ ಮಾಡದಂತೆ, ಅನವಶ್ಯಕ ಖರ್ಚು ಮಾಡದೇ ನಿರ್ಮಾಪಕರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಬೇಕಿದೆ ಎಂದು ಕಳೆದ ಶುಕ್ರವಾರ (ಮೇ 15) ಕಮಲ್ ಹಾಸನ್ ಕರೆ ನೀಡಿದ್ದರು. ಅದಕ್ಕೆ ಜನಸಾಮಾನ್ಯರಿಂದ ಬೆಂಬಲ ಸಿಕ್ಕರೂ, ಭಾರತದ ವಿವಿಧ ಚಿತ್ರರಂಗಗಳಿಂದ ಪ್ರತಿಕ್ರಿಯೆ ದೊರೆತಿಲ್ಲ. ಹಾಗಾದರೆ, ಕಮಲ್ ಕಾಸ್ಟ್ ಕಟಿಂಗ್ ಕರೆ ಸಾಧ್ಯವೋ? ಅಸಾಧ್ಯವೋ? ಸಾಧ್ಯವಾಗಿದ್ದಲ್ಲಿ ಚಿತ್ರರಂಗಗಳೇಕೆ ಬೆಂಬಲಿಸುತ್ತಿಲ್ಲ? ಕನ್ನಡ ಚಿತ್ರರಂಗದ ಪ್ರಮುಖರು ಏನಂತಾರೆ?
ಸಹಕಾರ ಸಿಕ್ಕರೆ, ಎಲ್ಲವೂ ಸಾಧ್ಯ
ಕನ್ನಡದ "ಕೆಡಿ', "ಟಾಕ್ಸಿಕ್', ತಮಿಳಿನ "ಜನನಾಯಗನ್', ತೆಲುಗಿನಲ್ಲಿ ಚಿರಂಜೀವಿ ನಾಯಕನಾಗಿ ನಟಿಸಲಿರುವ 158ನೇ ಸಿನಿಮಾ ಸೇರಿ ಕನ್ನಡದ ಕೆವಿನ್ ಪ್ರೊಡಕ್ಷನ್ಸ್ ಸಂಸ್ಥೆ ಹಲವು ಮೆಗಾ ಪ್ರಾಜೆಕ್ಟ್ಗಳನ್ನು ನಿರ್ಮಿಸುತ್ತಿದೆ. ಕಮಲ್ ಹಾಸನ್ ಕರೆಯನ್ನು ಸ್ವಾಗತಿಸಿರುವ ಸಂಸ್ಥೆಯ ಬಿಜಿನೆಸ್ ಹೆಡ್ ಆಗಿರುವ ಸುಪ್ರೀತ್, "ಸಿನಿಮಾ ಪ್ರಕ್ರಿಯೆ ಇಂದಲ್ಲ, ಕೆಲ ವರ್ಷಗಳಿಂದಲೇ ದುಬಾರಿಯಾಗಿದೆ. ಆದರೆ, ನಿರ್ಮಾಪಕರು, ನಿರ್ಮಾಣ ಸಂಸ್ಥೆ ಈ ಬಗ್ಗೆ ನಿರ್ಧಾರ ಮಾಡಿದರೆ ಸಾಲದು. "ಅ'ಯಿಂದ "ಳ'ವರೆಗೆ ಎಲ್ಲರೂ ಬದಲಾಗಬೇಕು. ಪ್ರತಿಯೊಬ್ಬರೂ ಮುಂದಾಳತ್ವ ತೆಗೆದುಕೊಳ್ಳಬೇಕು. ನಿರ್ಮಾಪಕರ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಎಲ್ಲರ ಸಹಕಾರ ಬೇಕಾಗುತ್ತದೆ. ದೊಡ್ಡ ಬಜೆಟ್ನಲ್ಲೇ ಸಿನಿಮಾ ಮಾಡಬೇಕು ಅಂತನೂ ಅಲ್ಲ. ಕಡಿಮೆ ಬಜೆಟ್ನಲ್ಲೂ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಬಹುದು. ಅದಕ್ಕೆ ಉತ್ತಮ ಉದಾಹರಣೆ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ "ಲವ್ ಮಾಕ್ಟೇಲ್ 3' ಎನ್ನುತ್ತಾರೆ.
ಒಮ್ಮತದ ಮನಸ್ಸು, ಒಮ್ಮತದ ನಿಲುವು ಬರಬೇಕು
ಕನ್ನಡ ಚಲನಚಿತ್ರ ನಿರ್ದೇಶಕರ ಸಂದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್, "ಯುದ್ಧಗಳಿಂದಾಗಿ ಎಲ್ಲ ಕ್ಷೇತ್ರಗಳಿಗೂ ಆರ್ಥಿಕ ಪೆಟ್ಟು ಬಿದ್ದಿದೆ. ವಿನಾ ಕಾರಣ ಖರ್ಚು ಮಾಡಬೇಡಿ ಎಂದು ಖುದ್ದು ಪ್ರಧಾನ ಮಂತ್ರಿ ಮೋದಿಯವರೂ ಹೇಳಿದ್ದಾರೆ. ಆದರೆ, ಯಾರೂ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ನಾನು, ನನ್ನದು ಎಂಬ ಅಹಂ ಹಾಗೂ ತಿಕ್ಕಾಟದ ನಡುವೆಯೇ ಬಹುತೇಕ ಎಲ್ಲ ಸಂಘ-ಸಂಸ್ಥೆಗಳು ಸಾಗುತ್ತಿವೆ. ಕಮಲ್ ಸರ್ ಮಾತು ನಿಜ. ಅವರ ಕರೆಯನ್ನು ಅನುಸರಿಸಿದರೆ, ಚಿತ್ರರಂಗಕ್ಕೆ ಒಳ್ಳೆಯದೇ. ಆದರೆ, ಅವರ ಮಾತು ಕೇಳುವವರಾರು? ಚಲನಚಿತ್ರ ವಾಣಿಜ್ಯ ಮಂಡಳಿ ಅಡಿಯಲ್ಲಿ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಬರುತ್ತಾರೆ. ಆದರೆ, ತೆಲುಗು ಚಿತ್ರರಂಗದಲ್ಲಿ ನೋಡಿ ಶೇರಿಂಗ್ ಮತ್ತು ಒಟಿಟಿ ಬಿಡುಗಡೆ ಸಂಬಂಧ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಹಲವು ತಿಂಗಳಿನಿಂದ ತಿಕ್ಕಾಟಗಳು ನಡೆಯುತ್ತಿವೆ. ಎಲ್ಲರೂ ಚಿತ್ರರಂಗ ಉದ್ಧಾರ ಮಾಡಬೇಕು ಎಂದು ಮನಸ್ಸು ಮಾಡಿ ಮುಂದಾಗಬೇಕು. ಆಗ ಮಾತ್ರ ಈಗಿನ ಸಮಸ್ಯೆ, ಮುಂದೆ ಬರಲಿರುವ ಸಂಕಷ್ಟಗಳನ್ನು ಎದುರಿಸಲು, ಪರಿಹರಿಸಿಕೊಳ್ಳಲು ಸಾಧ್ಯ' ಎಂದು ಹೇಳಿಕೊಳ್ಳುತ್ತಾರೆ.
ಸಮಸ್ಯೆಗಳಿವೆ, ಸಭೆಯಲ್ಲಿ ತೀರ್ಮಾನ...
"ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕಡಿಮೆಯಾಗಿವೆ' ಎನ್ನುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ, "ಮುಂದಿನ ತಿಂಗಳು ನಿರ್ಮಾಪಕರ ಸಂದ ಸಭೆ ಕರೆಯುತ್ತಿದ್ದೇವೆ. ಕಲಾವಿದರ ಸಂದ ಜತೆಗೂ ಚರ್ಚಿಸಲಿದ್ದೇವೆ. ಸಣ್ಣ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಕಂಟೆಂಟ್ ಇರುವುದಿಲ್ಲ. ದೊಡ್ಡ ಸ್ಟಾರ್ಗಳು ಪ್ಯಾನ್ ಇಂಡಿಯಾ ಅಂತ ಹೋಗಿರುವ ಕಾರಣ, ಅವರ ಸಿನಿಮಾಗಳು ತಡವಾಗಿ ಬಿಡುಗಡೆಯಾಗುತ್ತಿವೆ. ಕನ್ನಡದಲ್ಲಿ ನಾಯಕ ನಟರು ಕಡಿಮೆಯಾಗಿದ್ದಾರೆ. ಜತೆಗೆ ಹೊಸ ಹೀರೋಗಳಿಗೆ ಅವಕಾಶ ಸಿಗುತ್ತಿಲ್ಲ. ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದರೆ, ಹಣ ಮಾಡುತ್ತೆ ಎಂಬ ಗ್ಯಾರಂಟಿ ಇಲ್ಲ. ಹೀಗಾಗಿ ನಿರ್ಮಾಪಕರೂ ಕಡಿಮೆ ಆಗಿದ್ದಾರೆ. ಸ್ಟುಡಿಯೋಗಳು ಖಾಲಿ ಇವೆ. ಈ ಎಲ್ಲ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದೇವೆ' ಎನ್ನುತ್ತಾರೆ.