ತಿರುವನಂತಪುರಂ: ಇದು ಸಾಮಾಜಿಕ ಜಾಲತಾಣಗಳ ಯುಗ. ಹೀಗಾಗಿ ಅನೇಕ ಮಂದಿ ವಿವಿಧ ರೀತಿಯ ವಿಡಿಯೋ, ರೀಲ್ಸ್ಗಳನ್ನು ಮಾಡಿ ಫೇಮಸ್ ಆಗುತ್ತಿದ್ದಾರೆ. ಅಲ್ಲದೆ, ಕೆಲವರು ಪ್ರಸಿದ್ಧರಾಗಲು ಹರಸಾಹಸ ಮಾಡುತ್ತಿದ್ದಾರೆ. ಇದೇ ವೇಳೆ ಜಾಲತಾಣದಲ್ಲಿ ಟ್ರೋಲರ್ಸ್ ಎಂಬ ಇನ್ನೊಂದು ವರ್ಗವೂ ಸಹ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಟ್ರೋಲಿಂಗ್ ಕೂಡ ಸಾಮಾನ್ಯವಾಗಿದೆ. ಕೆಲವರು ಒಳ್ಳೆಯ ರೀತಿಯಲ್ಲಿ ಟ್ರೋಲ್ ಮಾಡಿದರೆ, ಇನ್ನು ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ. ಸೂಕ್ಷ್ಮ ಮನಸ್ಸಿನವರು ಕೆಟ್ಟ ಟ್ರೋಲ್ಗಳಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಕೆಟ್ಟ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಟ್ರೋಲ್ಗಳಿಂದ ಬೇಸತ್ತ ಯುವತಿಯೊಬ್ಬಳ ತನ್ನ ಬದುಕನ್ನು ಅರ್ಧದಲ್ಲೇ ಅಂತ್ಯಗೊಳಿಸಿದ್ದಾರೆ. ಕೇರಳದಲ್ಲಿ ಈ ದಾರುಣ ಘಟನೆ ನಡೆದಿದೆ.
ಕೇರಳ ರಾಜ್ಯದ ತಿರುವನಂತಪುರಂ ಪಟ್ಟಣದ ಕುನ್ನುಪುಳ ಪ್ರದೇಶದ ಆದಿತ್ಯಾ ಎಸ್ ನಾಯರ್ (18) ಎಂಬ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್ ಆಗಿದ್ದಳು. ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಉತ್ತಮ ಜನಪ್ರಿಯತೆ ಗಳಿಸಿದ್ದಳು. ತನ್ನ ವಿಡಿಯೋಗಳ ಮೂಲಕ ಸಾಕಷ್ಟು ಫಾಲೋವರ್ಸ್ ಹೊಂದಿದ್ದಳು. ಇದರ ನಡುವೆ ಬಿನೋಯ್ ಎಂಬ ಯುವಕ ಇನ್ಸ್ಟಾ ಮೂಲಕ ಆದಿತ್ಯಾಗೆ ಪರಿಚಯವಾದನು. ಆ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಗೆ ಕಾರಣವಾಯಿತು. ಆದಿತ್ಯಾ ಮತ್ತು ಬಿನೋಯ್ ಪ್ರೀತಿಯಲ್ಲಿ ಬಿದ್ದರು. ಅಲ್ಲದೆ, ಒಟ್ಟಿಗೆ ವಿಡಿಯೋ ಸಹ ಮಾಡುತ್ತಿದ್ದರು. ಹೀಗಾಗಿ ಈ ಇಬ್ಬರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ವಿಡಿಯೋಗಳ ಮೂಲಕ ತಮ್ಮ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಂಡಿದ್ದರು.
ಆದರೆ, ಇದ್ದಕ್ಕಿದ್ದಂತೆ ಇಬ್ಬರಿಗೂ ಏನಾಯಿತೋ ಏನೋ ಎರಡು ತಿಂಗಳ ಹಿಂದೆ ತಾವಿಬ್ಬರು ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಇದಾದ ಬಳಿಕವೇ ಆದಿತ್ಯಾಗೆ ಸಮಸ್ಯೆ ಆರಂಭವಾಯಿತು. ಟ್ರೋಲಿಗರು ಬಿನೋಯ್ ಅವರನ್ನು ಬೆಂಬಲಿಸಿ, ಆದಿತ್ಯಾ ಅವರನ್ನು ಟ್ರೋಲ್ ಮಾಡಲು ಆರಂಭಿಸಿದರು. ಕೆಟ್ಟದಾಗಿ ಕಾಮೆಂಟ್ಗಳನ್ನು ಪೋಸ್ಟ್ ಮಾಡಿ, ಮಾನಸಿಕವಾಗಿ ಹಿಂಸೆ ನೀಡಿದರು.
ಮೀಮ್‌ಗಳನ್ನು ಹಾಕಿ ಟ್ರೋಲ್ ಮಾಡವ ಮಟ್ಟಕ್ಕೆ ಹೋದರು. ಟ್ರೋಲ್‌ಗಳನ್ನು ದೀರ್ಘಕಾಲ ಸಹಿಸಿಕೊಂಡ ಆದಿತ್ಯಾ ಒಳಗೊಳಗೆ ಮಾನಸಿಕವಾಗಿ ಕುಗ್ಗಿದ್ದರು. ಕೊನೆಗೆ ಆಕೆಯ ಮೇಲಿನ ಟ್ರೋಲ್‌ಗಳನ್ನು ಸಹಿಸಲಾಗದೆ ಜೂನ್ 10 ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರು ಆದಿತ್ಯಾಳನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಆದಿತ್ಯ ಕಳೆದ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅಲ್ಲಿಯವರೆಗೆ ಟ್ರೋಲ್ ಮಾಡುತ್ತಿದ್ದ ಮೇಮರ್ಗಳು ಇದೀಗ ಸಂತಾಪ ಸೂಚಿಸಿ ಪೋಸ್ಟ್ ಹಾಕುತ್ತಿದ್ದಾರೆ. (ಏಜೆನ್ಸೀಸ್)