ನ್ಯೂಸ್

ಏನೇ ಆಗಲಿ.. ದಯವಿಟ್ಟು ಪಟಾಕಿ ಹೊಡೆಯಬೇಡಿ; ಕೇಜ್ರಿವಾಲ್ ಮನವಿ

Poornaprajna Beluru

ನವದೆಹಲಿ: ಪಟಾಕಿ ಸಿಡಿಸಿದರೆ ಕರೊನಾ ಸೋಂಕು ಶೀಘ್ರ ವ್ಯಾಪಿಸುತ್ತದೆ ಎಂದು ಕೆಲವು ತಜ್ಞರು ಶಂಕೆ ವ್ಯಕ್ತಪಡಿಸಿರುವುದರಿಂದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಕೋ ಬೇಡವೋ ಎಂಬ ಕುರಿತು ನಿರ್ಧರಿಸಲು ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ಸದರಿ ಸಮಿತಿಯು ಇಂದು ವರದಿ ಕೊಡುವ ನಿರೀಕ್ಷೆ ಇದ್ದು, ಅದರ ಆಧಾರದ ಮೇಲೆ ಪಟಾಕಿ ಮಾರಾಟ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬುಧವಾರವೇ ತಿಳಿಸಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಚಿಂತಿಸಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ನವದೆಹಲಿಯಲ್ಲಿ ಹೆಚ್ಚಿರುವ ಕರೊನಾ ಸೋಂಕು ಹಾಗೂ ವಾಯುಮಾಲಿನ್ಯ ವಿಕೋಪದಿಂದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ರಾಜ್ಯದ ಜನತೆ ಬಳಿ ವಿಶೇಷವಾದ ಮನವಿ ಮಾಡಿಕೊಂಡಿದ್ದಾರೆ. ಪಟಾಕಿ ಹೊಡೆಯುವ ಮೂಲಕ ನೀವು ನಿಮ್ಮ ಕುಟುಂಬದವರ ಜೀವದ ಜತೆ ಚೆಲ್ಲಾಟವಾಡಬೇಡಿ ಎಂದಿರುವ ಅವರು, ಏನೇ ಆಗಲಿ, ದಯವಿಟ್ಟು ಪಟಾಕಿ ಹೊಡೆಯಬೇಡಿ ಎಂದು ಕೋರಿಕೊಂಡಿದ್ದಾರೆ. ಅಲ್ಲದೆ ನ. 14ರ ರಾತ್ರಿ 7.49 ನಿಮಿಷದ ಬಳಿಕ ದೆಹಲಿಯ 2 ಕೋಟಿ ಜನರು ಜತೆಯಾಗಿ ಲಕ್ಷ್ಮೀ ಪೂಜೆ ನೆರವೇರಿಸಲಿದ್ದಾರೆ. ನಾನು ಪೂಜೆಗೆ ಚಾಲನೆ ನೀಡಲಿದ್ದು, ಟಿವಿಯಲ್ಲಿ ಅದರ ನೇರಪ್ರಸಾರವೂ ಇರಲಿದೆ ಎಂದು ಅವರು ತಮ್ಮ ರಾಜ್ಯದ ಜನತೆಗೆ ತಿಳಿಸಿದ್ದಾರೆ. (ಏಜೆನ್ಸೀಸ್​)