ನ್ಯೂಸ್

ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕೇಂದ್ರ ಸಚಿವರೊಂದಿಗೆ ಬಿವೈಆರ್ ಚರ್ಚೆ

ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರನ್ನೊಳಗೊಂಡ ನಿಯೋಗ ಸೋಮವಾರ ದೆಹಲಿಯಲ್ಲಿ ಸಂಸ್ಕೃತಿ ಹಾಗೂ ಕೇಂದ್ರ ಪ್ರವಾಸೋಧ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿಯಾಗಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದರು.

ಈ ವೇಳೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಹೊಸನಗರ ತಾಲೂಕಿನ ಬಿದನೂರು ಕೋಟೆಯ ಮರುನಿರ್ಮಾಣಕ್ಕೆ ಪುರಾತತ್ವ ಇಲಾಖೆಗೆ ಸೂಚನೆ ನೀಡಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದರು.

ಶಿಕಾರಿಪುರ ತಾಲೂಕು ಬಳ್ಳಿಗಾವಿಯ ಭೇರುಂಡೇಶ್ವರ ದೇವಾಲಯದ ಗರುಡ ಕಂಬ ಮರುಸ್ಥಾಪನೆ, ಅಲ್ಲಮಪ್ರಭ ಜನ್ಮಸ್ಥಾನವಾದ ಬಳ್ಳಿಗಾವಿಯ ಕೇದಾರನಾಥೇಶ್ವರ ದೇವಾಲಯದ ಸಂರಕ್ಷಣೆ, ಬಳ್ಳಿಗಾವಿ ಆಂಜನೇಯ ದೇವಾಲಯದ ಮರುಸ್ಥಾಪನೆ, ಭದ್ರಾವತಿ ಲಕ್ಷ್ಮೀನರಸಿಂಹ ದೇವಾಲಯದ ಸಂರಕ್ಷಣಾ ಕಾರ್ಯಕ್ಕೆ ಅನುಮತಿ ನೀಡುವಂತೆ ಪುರಾತತ್ವ ಇಲಾಖೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.