ನ್ಯೂಸ್

ಆತ್ಮಸಮನೊಂದಿಗಿನ ಅಪೂರ್ವ-ಸಮಾಗಮ

Webdesk - Mallikarjun K R
 ಅಯೋಧ್ಯಾಕಾಂಡದ ಸುಮಾರು ಮಧ್ಯಭಾಗಕ್ಕೆ ರಾಮನು ಗುಹನನ್ನು ಸಂಧಿಸುವ ಸಂನಿವೇಶವು ಒದಗಿಬರುವುದು. ಇವರಿಬ್ಬರಲ್ಲಿ ಒಬ್ಬನು ಮೇಲು, ಮತ್ತೊಬ್ಬ ಕೀಳು ಅಲ್ಲವೇ? ಹೇಗೆ? ರಾಮನು ಕ್ಷತ್ರಿಯವಂಶದವನು, ಇನ್ನೇನು ಯುವರಾಜನಾಗಿ ಪಟ್ಟಾಭಿಷಿಕ್ತನೇ ಆಗಬೇಕಾಗಿದ್ದವನು. ಆದರೆ ಗುಹನೋ ‘ನಿಷಾದಜಾತ್ಯ’ನು. ನಿಷಾದರೆಂದರೆ ಬೇಡರ ಜಾತಿಯವರು, ಎಂದರೆ ಮೃಗಗಳ ಬೇಟೆಯಿಂದಲೇ ಜೀವಿಸುವ ಕಾಡಾಡಿಗಳು. ಅಂದಿನ ಕಾಲಕ್ಕೆ ಅವರದ್ದೊಂದು ಕೆಳಜಾತಿ. ರಾಮಾಯಣದ ಆರಂಭವೇ ನಿಷಾದನೊಬ್ಬನ ಪಾಪ-ಕೃತ್ಯಕ್ಕೆ ವಾಲ್ಮೀಕಿಗಳಿತ್ತ ಶಾಪದಿಂದ - ಅಲ್ಲವೇ?

ಎಲ್ಲ ನಿಷಾದರೂ ಅಧರ್ವಿುಷ್ಠರೇ - ಎಂಬ ಭಾವನೆಯಿದ್ದಿದ್ದಲ್ಲಿ, ರಾಮನಿಗೂ ಈ ಗುಹನಿಗೂ ಸ್ನೇಹವೇ ಏರ್ಪಡುತ್ತಿರಲಿಲ್ಲ. ಆದರೆ ವಾಲ್ಮೀಕಿಗಳು ಆತನನ್ನು ‘ರಾಮಸ್ಯಾತ್ಮಸಮಃ ಸಖಾ’ ಎಂದೇ ಚಿತ್ರಿಸುತ್ತಾರೆ. ಏನು ಹಾಗೆಂದರೆ? ಗುಹನು ರಾಮನ ಸಖ. ಸಖ ಎಂದರೆ ಸ್ನೇಹಿತ; ಅಷ್ಟೇ ಅಲ್ಲ. ಆತ್ಮ-ಸಮನಾದ ಸಖ! - ತನಗೆ ಸಮನಾದ ಮಿತ್ರ - ಎಂಬುದಾಗಿ ವಾಲ್ಮೀಕಿಗಳು ಚಿತ್ರಿಸುತ್ತಾರೆ. ಕೆಳಜಾತಿಯವರ ಬಗ್ಗೆ ನಿಕೃಷ್ಟ-ಭಾವನೆಯಿದ್ದಿದ್ದಲ್ಲಿ ವಾಲ್ಮೀಕಿಗಳು ಗುಹನನ್ನು ರಾಮನಿಗೆ ಸಮನೆಂಬಂತೆ ಚಿತ್ರಿಸಲು ಸಾಧ್ಯವೇ? ರಾಜನಾದವನು ಎಲ್ಲರೊಂದಿಗೂ ಸ್ನೇಹದಿಂದಲೇ ಇರತಕ್ಕದ್ದು. ಪ್ರಜೆಗಳಲ್ಲಿ ಯಾರು ಯಾರು ಬಲಶಾಲಿಗಳೋ ಅವರೆಲ್ಲರೊಂದಿಗೆ ಸ್ನೇಹಭಾವವು ರಾಜನಿಗೆ ಮುಖ್ಯವಾಗುತ್ತದೆ. ಅಟವಿಯಲ್ಲಿ, ಎಂದರೆ ಕಾಡಿನಲ್ಲಿ, ವಾಸಮಾಡುವವರನ್ನು ಆಟವಿಕರು - ಎನ್ನುತ್ತಾರೆ. ಆಟವಿಕರಲ್ಲೂ ಅನೇಕ ಅನುಯಾಯಿಗಳನ್ನು ಹೊಂದಿರುವವರೂ, ಸೇನಾ-ಬಲವನ್ನೇ ಹೊಂದಿರುವವರೂ ಇರುವುದುಂಟು. ವಿಶೇಷ-ಪ್ರಸಂಗಗಳಲ್ಲಿ ಅವರ ಸ್ನೇಹ-ಸಾಹ್ಯಗಳೂ ರಾಜನಿಗೆ ಬೇಕಾಗಬಹುದು.

ಆದುದರಿಂದ ಅವರ ಪ್ರೀತಿ-ವಿಶ್ವಾಸ ಗಳನ್ನು ಗಳಿಸುವುದೂ ರಾಜನಿಗೆ ಅವಶ್ಯವಾಗುವುದು. ಹೀಗಾಗಿ ರಾಜ್ಯದ ರಕ್ಷಣೆಯ ದೃಷ್ಟಿಯಿಂದ ಊರಿನಲ್ಲಿರುವ ಹಾಗೂ ಕಾಡಿನಲ್ಲಿರುವ ಎಲ್ಲ ಬಲಶಾಲಿಗಳೊಂದಿಗೆ ಸಖ್ಯ-ಸೌಜನ್ಯಗಳನ್ನು ಕಾಪಾಡಿಕೊಳ್ಳುವುದು ರಾಜನಿಗೆ ಉಪಕಾರಿಯೇ ಆಗುತ್ತದೆ. ಗುಹನು ಸ್ಥಪತಿಯೆಂಬುದಾಗಿಯೂ ಪ್ರಸಿದ್ಧನಾಗಿದ್ದವನು. ಸ್ಥಪತಿಯೆಂದರೆ ಶಿಲ್ಪಿ. ಹೀಗೆ ಈ ಗುಹನು ಬಲವಾನ್ ಮಾತ್ರವಲ್ಲದೆ ಸ್ಥಪತಿಯೂ ಆದವನು. ಅರ್ಥಾತ್, ಸೈನ್ಯ-ಬಲವುಳ್ಳವನೂ, ಕಲಾ-ಜ್ಞಾನವಂತನೂ ಆಗಿರುವವನು.

ಇವೆಲ್ಲ ಆತನಲ್ಲಿದ್ದ ಗರಿಮೆಗಳೇ. ಆದರೆ ಅಷ್ಟುಮಾತ್ರದಿಂದಲೇ ರಾಮನಿಗೆ ಆತ್ಮ-ಸಮನಾದ ಸಖನಾಗಿಬಿಡುವುದಿಲ್ಲ, ಅಲ್ಲವೇ? ಹಾಗಿದ್ದರೆ ಆತನಲ್ಲಿದ್ದ ಮತ್ತಾವ ಗುಣದಿಂದಾಗಿ ರಾಮನು ಆತನ ವಿಷಯದಲ್ಲಿ ಸಾದರನಾಗಿದ್ದನು? ಒಬ್ಬನನ್ನು ಅಳೆದುಕೊಳ್ಳಲು ಆತನ ಬಗ್ಗೆ ಇತರರು ಏನು ಹೇಳುತ್ತಾರೆ? - ಎಂದು ಗಮನಿಸುವುದು ಸಹಜವೂ ಸುಲಭವೂ ಆದ ಕ್ರಮವೇ; ಆದರೆ ಅದನ್ನೇ ನೆಚ್ಚಿಕೊಳ್ಳುವುದು ಯುಕ್ತವಾಗಲಾರದು. ಬೇರೆಯವರ ಮಾತಿಗೆ ಬೆಲೆಗೊಡುವುದಕ್ಕಿಂತ ಹೆಚ್ಚಾಗಿ, ನಮ್ಮೊಂದಿಗೆ ಆ ವ್ಯಕ್ತಿಯ ವ್ಯವಹಾರವು ಯಾವ ತೆರನಾದುದು? - ಎಂಬುದನ್ನೇ ಪ್ರಧಾನವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.

ರಾಮನೊಂದಿಗೆ ಗುಹನು ವರ್ತಿಸಿದ ಬಗೆಯೇನು? - ಎಂಬುದನ್ನು ಕಿಂಚಿತ್ತಾದರೂ ನೋಡಬೇಕಲ್ಲವೇ? ತನ್ನೆಡೆಯ ಸೀಮೆಯೊಳಗೆ ರಾಮನು ಬಂದುದನ್ನು ತಿಳಿದೊಡನೆಯೇ, ವೃದ್ಧರು, ಅಮಾತ್ಯರು, ಹಾಗೂ ಬಂಧುಗಳೊಂದಿಗೆ ಬಂದವನೇ, ರಾಮನನ್ನು ಆದರದಿಂದ ಎದುರ್ಗೆಂಡ, ಗುಹ. ರಾಮನನ್ನು ಆಲಿಂಗಿಸಿಕೊಂಡು ಆತನು ಹೇಳಿದ್ದೇನು? ‘ರಾಮನೇ, ಅಯೋಧ್ಯೆಯೆಂತೋ ಈ ಪ್ರದೇಶವೂ ನಿನಗೆ ಅಂತೆಯೇ. ನಿನಗಾಗಿ ನಾನು ಏನು ಮಾಡಲಿ ಹೇಳು. ಇಂತಹ ಪ್ರಿಯಾತಿಥಿಯನ್ನು ಯಾರು ತಾನೆ ಹೊಂದಿಯಾರು?’

ಜೊತೆಗೆ, ಅಘರ್Â-ಪಾದ್ಯಗಳನ್ನೂ ಅನ್ನಾಹಾರಗಳನ್ನೂ ವ್ಯವಸ್ಥೆ ಮಾಡಿದನು. ಮತ್ತೆ ಹೇಳಿದನು: ‘ರಾಮನೇ, ನನ್ನೀ ಭೂಮಿಯೆಲ್ಲಾ ನಿನ್ನದೇ. ನಾವು ನಿನ್ನ ಆಳುಗಳು. ನೀನೇ ನಮಗೆ ಒಡೆಯ. ನಮ್ಮ ರಾಜ್ಯವನ್ನು ನೀನೇ ಚೆನ್ನಾಗಿ ಆಳು’- ಎಂದುದಲ್ಲದೆ, ‘ಇದೋ ನಿನಗಾಗಿ ಬಂದಿವೆ ಈ ಭಕ್ಷ್ಯ-ಭೋಜ್ಯಗಳು, ಪೇಯ-ಲೇಹ್ಯಗಳು; ನಿದ್ರಿಸಲು ಶಯ್ಯೆಗಳು ಸಿದ್ಧವಾಗಿವೆ; ನಿನ್ನ ಕುದುರೆಗಳಿಗೂ ಆಹಾರವುಬಂದಿದೆ’ ಎಂದನು. ಮಹೋನ್ನತವಾದ ಬದುಕು ಎದುರಿಗೆ ಬಂದಿರಲು, ಅದರ ಗುರುತ್ವವನ್ನು ಗುರುತಿಸಿಕೊಂಡವನ ಮೈ-ಮನಸ್ಸುಗಳು ಸಹಜವಾಗಿ ಬಗ್ಗುವಲ್ಲಿ, ‘ನ ಮಮ’-‘ನಮಃ’-ಗಳು ತಾವಾಗಿ ಉಂಟಾಗುವ ಬಗೆಯೊಂದುಂಟು; ಅದುವೇ ಪೂರ್ಣ- ಸಮರ್ಪಣೆಯ ತತ್ತ್ವ - ಎಂಬುದನ್ನು ಶ್ರೀರಂಗ-ಮಹಾಗುರುಗಳು ಸುಭಗವಾಗಿ ನಿರೂಪಿಸಿದ್ದರು. ಕೇವಲ ಪರಸ್ಪರೋಪಯೋಗಕ್ಕೆ

ಬರುವಷ್ಟೇ ದೃಷ್ಟಿಯಿಂದಾದ ವ್ಯವಹಾರದ ಪರಿಯಿದಲ್ಲ. ರಾಮನ ವಿಷಯದಲ್ಲಿ ಗುಹನಿಗೆ ಉತ್ಕಟ- ಗೌರವವೂ; ಗುಹನ ಬಗೆಗೆ ರಾಮನಿಗೆ ಅತಿಶಯಿತ- ಪ್ರೀತಿಯೂ - ಇದ್ದುವಾಗಿ, ಇಂತಹ ಅಕಪಟ- ಪ್ರೀತಿ- ಗೌರವಗಳ ಮಧುರ-ಮೇಳನವಿದ್ದಾಗ ಆತ್ಮ-ಸಮನೆಂಬೀ ಆರ್ದ್ರವಾದ ಉಕ್ತಿಯು ಸತ್ಯ-ಸಹಜವಾದುದೇ ಅಲ್ಲವೇ?

(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)