ಅರೆ! ಇವನ ಪೊಗರೇ! ನನ್ನ ಕೈಲಾಗದ್ದು ಇವನೇನು ಮಾಡಿಯಾನು? ನೋಡಿಯೇ ಬಿಡೋಣವೆಂದು ಸವಾಲಿಗೆ ಒಪ್ಪಿದೆ. ನಾನು ಸೋತರೆ ಅವನಿಗೆ ರೂ. 375ರ ಎರಡು ಡೈರಿಮಿಲ್ಕ್ ಚಾಕಲೇಟ್ ಕೊಡಿಸುವುದು, ಅವನು ಸೋತರೆ ನನ್ನಿಂದ ಹತ್ತು ಪೆಟ್ಟು ತಿನ್ನುವುದೆಂದು ಮನೆಯವರೆಲ್ಲರ ಎದುರು ಒಪ್ಪಂದವಾಯಿತು.
ಸರಿ, ಈ ಮಹಾನ್ ಕಲಾಕಾರ ಆರಂಭಿಸಿದ. ಮೂತಿ ಸೊಟ್ಟ ಮಾಡಿದ. ಒಂದೇ ಕಣ್ಣಿನ ಹುಬ್ಬು ಮೇಲೆ ಕೆಳಗೆ ಮಾಡಿದ. ಬೆಕ್ಕಿನಂತೆ ಮಿಯಾಂವ್ ಎಂದ. ನಾಯಿಯಂತೆ ಬೊಗಳಿದ. ಉಠ್ ಬೈಸ್, ಸೂರ್ಯ ನಮಸ್ಕಾರ, ಲಾಗ ಹಾಕಿದ. ಎಲ್ಲವನ್ನೂ ಅನೂಚಾನವಾಗಿ ಮಾಡಿದೆ. ವಿಜಯ ಪತಾಕೆ ಹಾರಿಸಲು ಸಿದ್ಧನಾದೆ. ಈಗ ಹೇಮಂತ ಸುತ್ತ ನಿಂತ ಮನೆಯವರಿಗೆ ಕಣ್ಣು ಹೊಡೆದು ತನ್ನ ಶರ್ಟ್ ಬಿಚ್ಚಿ ಎಸೆದ. ಮನೆಯವರ ಮೊಗದಲ್ಲಿ ಅದೊಂಥರಾ ಕುಚೇಷ್ಟೆಯ ನಗು. ಏಕೋ ಅಪಾಯದ ವಾಸನೆ ಮೂಗಿಗೆ ಬಡಿಯಿತು. ನಾನೂ ಶರ್ಟ್ ಬಿಚ್ಚಿ ಎಸೆದೆ. ಪ್ಯಾಂಟನ್ನೂ ಕಳಚಿ ಎಸೆದ. ನಾಚಿಕೆಯೆನಿಸಿದರೂ ಮರ್ಯಾದೆಯ ಪ್ರಶ್ನೆ. ಪಂಚೆ ಬಿಚ್ಚಿ ಒಗಾಯಿಸಿದೆ. ಮೈಮೇಲಿರುವುದು ಕೇವಲ ಒಂದು ಪಟಾಪಟೆ ಚಡ್ಡಿ! ಪಟಾಕಿ ಮೊಮ್ಮಗ ತಾನು ಹಾಕಿದ್ದ ಚಡ್ಡಿಯನ್ನೂ ಬಿಚ್ಚಿ ಎಸೆದ. ದಿಗಂಬರಾವತಾರ! ಒಮ್ಮೆಲೇ 300 ವೋಲ್ಟ್ ಕರೆಂಟ್ ಶಾಕ್ ಹೊಡೆದಂತಾಯಿತು. ಶರಣು ಪ್ರಭುವೇ ಎಂದು ಸೋಲೊಪ್ಪಿ ಬಟ್ಟೆ ಧರಿಸಿದೆ. ಚಾಕಲೇಟಿಗೆ ಹಣ ಕೊಟ್ಟೆ. ಸೊಸೆ ನಗುತ್ತಾ ಕ್ಯಾಲೆಂಡರ್ ಮುಖಕ್ಕೆ ಹಿಡಿದಳು. ಏಪ್ರಿಲ್ ಒಂದು! ಮೊಮ್ಮಗನೆದುರು ಮೂರ್ಖನಾಗಿದ್ದೆ!
| ಕೆ. ಶ್ರೀನಿವಾಸರಾವ್ ಹರಪನಹಳ್ಳಿ
ಒಂದು ದಿನ ನಾನು ನನ್ನ 5 ವರ್ಷದ ಮಗ ಅಥರ್ವನ ಜತೆ ಸ್ವಲ್ಪ ತಮಾಷೆ ಮಾಡಲು ನಿರ್ಧರಿಸಿದೆ. ಅವನು ತನ್ನ ಜನ್ಮದಿನವನ್ನು ವಾರಗಳಿಂದ ಎದುರು ನೋಡುತ್ತಿದ್ದನು ಮತ್ತು ಅವನಿಗೆ ಇಡೀ ದಿನವನ್ನು ಮೀಸಲಿಡಲು ಅವನು ರೋಮಾಂಚನಗೊಳ್ಳುತ್ತಾನೆ ಎಂದು ನನಗೆ ತಿಳಿದಿತ್ತು. ಆದರೆ, ಅವನ ನಿಜವಾದ ಜನ್ಮದಿನದ ಬದಲು, ಅವನ ನಕಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದೆ.
ಏಪ್ರಿಲ್ ಫೂಲ್ ದಿನದಂದು ಅಥರ್ವ ಎಚ್ಚರವಾದಾಗ ನಾನು ಅವನ ಹುಟ್ಟುಹಬ್ಬ ಮತ್ತು ಈಗ ಅವನಿಗೆ 6 ವರ್ಷ ಎಂದು ಹೇಳಿದೆ. ಅಥರ್ವ ತುಂಬಾ ಉತ್ಸುಕನಾಗಿದ್ದ, ಅವನು ಹಾಸಿಗೆಯಿಂದ ಜಿಗಿದು ತನ್ನ ಹುಟ್ಟುಹಬ್ಬದ ಸಂತೋಷಕೂಟಕ್ಕಾಗಿ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದ. ನಾನು ಲಿವಿಂಗ್ ರೂಮ್ಲ್ಲಿ ಅಲಂಕಾರಗಳು ಮತ್ತು ಬಲೂನ್ಗಳನ್ನು ಹೊಂದಿಸಿ ಇಟ್ಟಿದ್ದೆ. ದಿನವಿಡೀ ನಾನು ಮತ್ತು ಅಥರ್ವನ ಅಮ್ಮ ನಿಜವಾಗಿಯೂ ಅಥರ್ವನ ಜನ್ಮದಿನ ಎಂದು ಬಿಂಬಿಸುತ್ತಾ ತಮಾಷೆಯನ್ನು ಮುಂದೆವರಿಸಿದೆವು. ಹುಟ್ಟುಹಬ್ಬದ ಶುಭಾಶಯಗಳು ಎಂದು ಹಾಡಿದೆವು, ವಿಶೇಷ ಉಪಾಹಾರ ನೀಡಿದೆವು. ಮೇಣದಬತ್ತಿಗಳೊಂದಿಗೆ ಕೇಕ್ ಸಹ ಕತ್ತರಿಸಿದೆವು ದಿನ ಕಳೆದಂತೆ ಅಥರ್ವನಿಗೆ ಏನೋ ಅನುಮಾನ ಮೂಡತೊಡಗಿತು. ಹುಟ್ಟುಹಬ್ಬ ಆಚರಿಸಲು ಅವನ ಸ್ನೇಹಿತರು ಬಂದಿಲ್ಲ ಎಂದು ತಿಳಿಯಿತು. ತನ್ನ ಸ್ಪೆಷಲ್ ದಿನ ಅಂದುಕೊಂಡಷ್ಟು ಖುಷಿಯಾಗಿರಲಿಲ್ಲವೇನೋ ಎಂದು ಬೇಸರಗೊಂಡು ಗೊಂದಲಕ್ಕೊಳಗಾಗತೊಡಗಿದ.
ಆಗ ನಾನು ಇದೆಲ್ಲವೂ ಏಪ್ರಿಲ್ ಫೂಲ್ ದಿನದ ಮೂರ್ಖತನದ ತಮಾಷೆಯಾಗಿದೆ ಮತ್ತು ನಿನ್ನ ನಿಜವಾದ ಜನ್ಮದಿನವು ಇನ್ನೂ ಒಂದು ತಿಂಗಳು ಇದೆ ಎಂದು ಹೇಳಿದೆ. ಅಥರ್ವ ಆರಂಭದಲ್ಲಿ ಸ್ವಲ್ಪ ಬೇಸರಗೊಂಡರೂ ನಂತರ ತಮಾಷೆ ಆಗಿ ಸ್ವೀಕರಿಸಿ ನಗತೊಡಗಿದ.
| ಡಾ. ಅರುಣ ಸ. ತಿಗಡಿ ಬೆಳಗಾವಿ
| ಎಂ.ಕೆ.ಮಂಜುನಾಥ್ ಬೆಂಗಳೂರು
ಹೇಳಿ ಕೇಳಿ ಏಪ್ರಿಲ್ ತಿಂಗಳು.ಅದು ಚೈತ್ರಮಾಸ ಅದರಲ್ಲೂ ಯುಗಾದಿಯ ದಿನಗಳು. ಎಲ್ಲರೂ ಒಟ್ಟಿಗೆ ಕೂಡಿನಲಿವ ದಿನಗಳು. ನಮ್ಮ ಮನೆಯಲ್ಲಿ ನಾನು, ನನ್ನ ಅಣ್ಣ ಮತ್ತು ನಮ್ಮ ವಠಾರದ ಗೆಳೆಯರ ತಂಡ ಆಟವಾಡಿ ಇರುತ್ತಿರುವಾಗ, ಮಾರನೇ ದಿನ ಏಪ್ರಿಲ್ ಒಂದನೇ ತಾರೀಖು ಎಂದು ಗೊತ್ತಾಯಿತು. ಏಪ್ರಿಲ್ ಫೂಲ್ ಮಾಡಬೇಕೆಂದು ನಾನು ಮನಸ್ಸಿನಲ್ಲಿ ಯೋಚಿಸುತ್ತಿರುವಾಗ ಆಗ ಹೊಳೆದಿದ್ದೇ ಮಾವಿನ ಕಾಯಿಯೊಂದಿಗೆ ಕುಂಕುಮ ಸೇರಿಸುವುದು.
ನಾನು ಎಲ್ಲರನ್ನೂ ಸೇರಿಸಿ ಹೇಳಿದೆ, ‘ನಾನು ಒಂದು ಐಡಿಯಾ ಮಾಡಿದ್ದೇನೆ, ನೀವು ಯಾರಿಗೂ ಹೇಳಬೇಡಿ. ಅದು ಗೆಳೆಯ ನಾಗರಾಜನ್ನು ಬಿಟ್ಟು’ ಎಂದೆ. ಮಾರನೇ ದಿನ ನಾವು ಒಟ್ಟಿಗೆ ಸೇರಿ ಮೂರು ಮಾವಿನಕಾಯಿ ತಂದು ಸಣ್ಣಗೆ ಹೆಚ್ದಿ, ಖಾರದ ಪುಡಿ ಹಾಕಿದೆವು. ಇನ್ನೊಂದಿಷ್ಟಕ್ಕೆ ಖಾರದ ಪುಡಿಯ ಬದಲಾಗಿ ಕುಂಕುಮ ಪುಡಿ ಹಾಕಿ ಬೇರೆ ಇಟ್ಟಿದ್ದೆ.
ನಾವೆಲ್ಲ ಖಾರದ ಪುಡಿ ಹಚ್ಚಿದ ಮಾವಿನ ಕಾಯಿ ತಿನ್ನುತ್ತಿರುವಾಗ ನನ್ನ ತಮ್ಮನಿಗೆ ನಾಗರಾಜನನ್ನು ಕರೆಯಲು ತಿಳಿಸಿದೆ. ಆತ ನಮ್ಮ ಬಳಿ ಬಂದಾಗ ನಾವು ಮಾವು ತಿನ್ನುತ್ತಿರುವುದು ನೋಡಿ ಆತನ ಬಾಯಿ ನೀರೂರಿತು. ತನಗೂ ಬೇಕೆಂದ. ತಕ್ಷಣ ಕುಂಕುಮ ಬೆರೆಸಿದ್ದನು ಕೊಟ್ಟೆ. ಬಾಯಿಗೆ ಹಾಕಿಕೊಂಡ ತಕ್ಷಣ, ಏನೋ ಒಂಥರಾ ಆಗುತ್ತಿದೆ ಎಂದ. ನಾವು ಅವನ ಹಾವ ಭಾವ ನೋಡಿ ತಡಿಯಲಾರದೆ ನಕ್ಕಿದ್ದೇ ನಕ್ಕಿದ್ದು. ಮಾವಿನ ಕಾಯಿ ಜತೆಗೆ ಖಾರಪುಡಿ ಬದಲಾಗಿ ಕುಂಕುಮ ಸೇರಿಸಿದ್ದನ್ನು ಹೇಳಿದೆ. ಎಲ್ಲಾರೂ ಗಟ್ಟಿಯಾಗಿ ಏಪ್ರಿಲ್ ಫೂಲ್ ಎಂದು ಕೂಗಿ ಕುಣಿದಾಡಿದೆವು.
| ಧನ್ವಂತರಿ ಮಾನ್ವಿ ಬಳ್ಳಾರಿ
ನನಗೆ ಆಶ್ಚರ್ಯ! ನಾನು ಕೆಲ ದಿನಗಳ ಹಿಂದೆ ಬ್ಯಾಂಕ್ ನೇಮಕಾತಿ ಪರೀಕ್ಷೆ ಬರೆದಿದ್ದೆ. ಆದರೆ, ಅದು ಅಷ್ಟೇನೂ ಸರಿಯಾಗದ ಕಾರಣ ಫಲಿತಾಂಶದ ನಿರೀಕ್ಷೆಯಲ್ಲಿ ಇರಲಿಲ್ಲ. ಹಾಗಾಗಿ ನನಗೆ ಈ ಸುದ್ದಿ ಕೇಳಿ ಆನಂದಕ್ಕಿಂತ ಆಶ್ಚರ್ಯವೇ ಆಯಿತು. ಇವತ್ತು ಯಾವ ದಿನಾಂಕ ಎಂದು ನೆನಪು ಮಾಡಿಕೊಂಡೆ, ಏಪ್ರಿಲ್ 1. ಸಾಮಾನ್ಯವಾಗಿ ಐಬಿಪಿಎಸ್ ಪರಿಕ್ಷಾ ಫಲಿತಾಂಶವನ್ನು ಪ್ರತಿವರ್ಷ ಏಪ್ರಿಲ್ 1ರಂದು ಪ್ರಕಟಿಸುತ್ತಾರೆ. ಆದರೆ, ಅವತ್ತು ಮೂರ್ಖರ ದಿನವೂ ಹೌದು ಅನ್ನೋದು ನೆನಪಾಗಲಿಲ್ಲ.
ಮತ್ತೊಮ್ಮೆ ನನ್ನ ಪತಿರಾಯನನ್ನು ಇದು ನಿಜವೇ ಎಂದು ಕೇಳಿದೆ. ಅದಕ್ಕವರು ಮತ್ತಷ್ಟು ಹುರುಪಿನಿಂದ, ಹೌದು ಕಣೇ ಎಂದರು. ಅವರ ಮಾತನ್ನು ನಂಬಿದ ನಾನು ಕೂಡಲೇ ಮೊಬೈಲ್ಫೋನ್ ತೆಗೆದುಕೊಂಡು ಫೇಸ್ಬುಕ್, ಇನಸ್ಟಾಗ್ರಾಮ್ ವಾಟ್ಸಪ್ನಲ್ಲಿ ನಾನು ಬ್ಯಾಂಕ್ ಎಕ್ಸಾಮ್ ಪಾಸಾದೆ ಎಂದು ಸ್ಟೇಟಸ್ ಹಾಕಿದೆ. ನೂರಾರು ಕಮೆಂಟ್ಗಳು, ಶುಭಾಶಯಗಳು ಹರಿದುಬಂದವು. ನನ್ನ ಗೆಳತಿಯೊಬ್ಬಳು ನನಗೆ ಪೋನ್ ಮಾಡಿ ಎಷ್ಟು ಮಾರ್ಕ್ಸ್ ಬಂದಿವೆ ಎಂದು ಕೇಳಿದಾಗಲೇ ಸ್ವತಃ ನನ್ನ ಫಲಿತಾಂಶ ನೋಡಲು ವೆಬ್ಸೈಟ್ ಕ್ಲಿಕ್ಕಿಸಿದೆ. ಆಗ ಆಕಾಶವೇ ಒಂದು ಕ್ಷಣ ರಪ್ಪನೆ ಬಿದ್ದ ಅನುಭವ. ನಾನು ಪಾಸ್ ಆಗಿರಲಿಲ್ಲ. ಕೂಡಲೇ ಪತಿರಾಯನ ಕಡೆಗೆ ನೋಡಿದೆ. ಏಪ್ರಿಲ್ ಫೂಲ್ ಆದೆ ಕಣೆ ನೀನು ಅಂದರು. ಸಾಮಾಜಿಕ ಜಾಲತಾಣದಲ್ಲಿ ನನ್ನ ಸ್ಟೇಟಸ್ ನೋಡಿದ ಎಷ್ಟೋ ಜನ ಈಗಲೂ ಎಲ್ಲಿ ನಿನ್ನ ಪೋಸ್ಟಿಂಗ್ ಎಂದು ಕೇಳುತ್ತಾರೆ. ಎಕ್ಸಾಂ ಪಾಸ್ ಆಗದೆ ಮೂರ್ಖರ ದಿನದಂದು ಬ್ಯಾಂಕ್ ಆಫೀಸರ್ ಆದ ಈ ಪ್ರಸಂಗ ಯಾವತ್ತೂ ಬೆಸ್ತು ಬೀಳಿಸುತ್ತದೆ.
| ಸುನಿತಾ ಬಸವರಾಜ ಕುಳಲಿ ಅಥಣಿ
ಆಡು ಆಟವಾಡು, ಮಾಡು ಬಕ್ರಾ ಮಾಡು ಎಂದು ಪ್ರತಿ ವರ್ಷ ಏಪ್ರಿಲ್ 1ರಂದು ಕಟ್ಟು ಕಥೆ, ಸುಳ್ಳನ್ನು ಹೇಳಿ ಸ್ನೇಹಿತರನ್ನು ಫೂಲ್ ಮಾಡುವುದು ಸಾಮಾನ್ಯ. ಆದರೆ, ಕಳೆದ ವರ್ಷ ಬಕ್ರಾ ಆಗುವುದು ಬೇಡವೆಂದು ನಿರ್ಧರಿಸಿ ಅಂದು ಮನೆಯಲ್ಲಿ ಸಿನಿಮಾ ನೋಡುವುದು, ಅಡುಗೆ ಮಾಡುವುದರೊಂದಿಗೆ ಫೂಲ್ ಆಗದೆ ದಿನ ಕಳೆಯಿತು ಅನ್ನುವಷ್ಟರಲ್ಲಿ, ನನಗಾಗಿ ಒಂದು ಸಪ್ರರ್ೈ್ ಕಾದಿತ್ತು. ಅದೇನೆಂದರೆ ದಿನದ ಕೊನೆಯಲ್ಲಿ ಮೊಬೈಲ್ಫೋನ್ ನೋಡುವಾಗ ವಾಟ್ಸಪ್ನಲ್ಲಿ ಗೆಳೆಯ ಒಂದು ಫೋಟೋ ಕಳುಹಿಸಿದ. ಮೇಲಿಂದ ನೋಡಿದಾಗ ಸುಂದರ ಬಾಲೆಯ ಫೋಟೋ ಇರಬಹುದು ಎಂದು ಅನಿಸುತಿತ್ತು. ಕುತೂಹಲ ತಾಳದೆ ಫೋಟೋ ಡೌನಲೋಡ್ ಮಾಡಿ ನೋಡಿದರೆ, ಸುಂದರ ಬಾಲೆಯ ಚಿತ್ರಕ್ಕೆ ಮಂಗನ ಮುಖ ಅಂಟಿಸಿ ಏಪ್ರಿಲ್ ಫೂಲ್ ಎಂದು ಬರೆಯಲಾಗಿತ್ತು. ಹೀಗೆ ಅಂದು ಬಾಲೆಯ ಚಿತ್ರ ನೋಡಲು ಹೋಗಿ ಫೂಲ್ ಆದೆ.
| ಆನಂದ ಜೇವೂರ್ ಕಲಬುರಗಿ
‘ಏನು, ರೇಡಿಯೊ ವಾರ್ತೆ ಕೇಳಿಲ್ವಾ? ನಾಳೆಯ ಪರೀಕ್ಷೆ ರದ್ದಾಗಿ ಅದನ್ನು ಇವತ್ತು ನಡೆಸಲು ತಿಳಿಸಲಾಗಿದೆ ಎಂದು ವಾರ್ತೆಯಲ್ಲಿ ಪ್ರಸಾರವಾಯಿತು’ ಎಂದು ಸ್ನೇಹಿತ ಹೇಳಿದ. ‘ಹೌದಾ? ಅಯ್ಯೋ ನಾನು ವಾರ್ತೆನೆ ಕೇಳಿಲ್ಲ’ ಎಂದು ಮನೆ ಕಡೆ ಓಡಿದ ಗೋಪಾಲ್. ನಾವು ಸರಿಯಾಗಿ ಏಪ್ರಿಲ್ ಫೂಲ್ ಮಾಡಿದೇವು ಎಂದು ಹೊರಟು ಹೋದೆವು. ಆಗ ಇನ್ನೂ ಬೆಳಗಿನ ಎಂಟೂವರೆ ಗಂಟೆ, ಪರೀಕ್ಷೆಗೆ ಇನ್ನೂ ಒಂದೂವರೆ ಗಂಟೆ ಸಮಯ ಇದೆ ಎಂದು ಗೋಪಾಲ್ ಗಡಿಬಿಡಿಯಿಂದ ತಯಾರಾಗಿ ಓಡತೊಡಗಿದ. ನಾಲ್ಕು ಕಿ.ಮೀ ದೂರ ನಡೆದುಕೊಂಡು ಹೋಗಿ ಬಸ್ಸು ಹಿಡಿದು ಇಪ್ಪತ್ತು ಕಿ.ಮೀ ದೂರದ ಪರಿಕ್ಷಾ ಕೇಂದ್ರಕ್ಕೆ ಹೋದಾಗಲೇ ಗೊತ್ತಾಗಿದ್ದು ನಾವೆಲ್ಲ ಸೇರಿ ಮಾಡಿದ್ದು ಏಪ್ರಿಲ್ ಫೂಲ್ ಎಂದು.
| ರಾಜು ಪವಾರ್ ಬೆಂಗಳೂರು
ನಾನು, ನನ್ನ ತಂಗಿ ಆಟವಾಡಲು ಹೊರ ಹೋಗಿದ್ದೆವು. ಆಟ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಟಿವಿ ನೋಡುತ್ತಾ ಕುಳಿತಿದ್ದೆವು. ಗೆಳತಿಯರು ಕರೆದಿದ್ದರಿಂದ ನಮ್ಮ ಅಮ್ಮ ಹೊರಗಡೆ ಹೋದರು. ಆಗ ನಾನು ಕೂಡ ಹೊರಗಡೆ ಹೋದೆ. ನನ್ನ ತಂಗಿ ಊಟ ಮಾಡುತ್ತಿದ್ದಳು. ಅದಕ್ಕೆ ಅವಳು ಬರಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ ಏನೋ ಬಿದ್ದಂಗೆ ಆಯಿತು. ಅಮ್ಮ ಮನೆಗೆ ಬಂದು ಎಲ್ಲಾ ಕಡೆ ಹುಡುಕಿದರು. ಆಗ ನನ್ನ ತಂಗಿ ಅಡಿಗೆ ಮನೆಯಲ್ಲಿ ಬಿದ್ದಿದ್ದಳು. ಅವಳ ಕೈ, ಕಾಲು,ಮುಖ ಎಲ್ಲವೂ ರಕ್ತವಾಗಿತ್ತು. ಏನಾಯ್ತು ಎಂದು ಕೇಳಿದಾಗ... ‘ನನಗೆ ಬಿಸ್ಕೆಟ್ ಬೇಕಿತ್ತು ಚೇರ್ ಮೇಲಿಂದ ಬಿದ್ದೆ..’ ಎಂದು ಹೇಳಿದಳು ಆಗ ನಾನು ಮತ್ತು ಅಮ್ಮ ಇಬ್ಬರು ಗಾಬರಿಯಾಗಿ ಅಪ್ಪನಿಗೆ ಫೋನ್ ಮಾಡಿದೆವು. ಆಗ ತಂಗಿ ನಕ್ಕು, ಅಮ್ಮ ಇದು ರಕ್ತವಲ್ಲ ಸಾಸ್ ಎಂದು ಹೇಳಿ ನಮ್ಮನ್ನು ಏಪ್ರಿಲ್ ಫೂಲ್ ಮಾಡಿದಳು.
| ಸಂಜಯ್ ಎಂ.ಹೆಳವರ್ ಹುಬ್ಬಳ್ಳಿ
| ರುದ್ರಮುನಿ ಕೆ. ರಾಂಪುರ (ವಿಜಯನಗರ ಜಿಲ್ಲೆ)
ಏಪ್ರಿಲ್ 1ರಂದು ಅವಳನ್ನು ಬಕ್ರಾ ಮಾಡುವ ಉದ್ದೇಶದಿಂದ ಬೆಳಗ್ಗೆ ಐದು ಮೂವತ್ತಕ್ಕೆ ಎದ್ದೆ. ಆದರೆ, ಅವಳು ಅದಾಗಲೇ ಎದ್ದಿದ್ದಳು. ಮನೆಯಲ್ಲಿ ನಿಶ್ಧಬ್ದ. ಅವಳನ್ನು ಹುಡುಕುತ್ತ ನಿಧಾನವಾಗಿ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ಇರಲಿಲ್ಲ. ಅಕ್ವಾಗಾರ್ಡಿನಿಂದ ನೀರು ತುಂಬಿಸಿಕೊಳ್ಳುತ್ತಿರುವಾಗ, ‘ಹಾವು... ಹಾವು... ಅಕ್ಕ ನಿನ್ನ ಕಾಲ ಕೆಳಗೆ ಹಾವು...’ ಎಂದು ಜೋರಾಗಿ ಕಿರುಚಿದಾಗ ಗಾಬರಿಯಿಂದ ಎಲ್ಲಿ? ಎಲ್ಲಿ? ಎಂದು ಕೇಳುತ್ತಿರುವಾಗ ನನ್ನ ಕೈಲ್ಲಿದ್ದ ಲೋಟ ಬಿದ್ದು ನೀರು ಚೆಲ್ಲಿತ್ತು. ನನ್ನ ಉಪಾಯ ನನಗೇ ತಿರುವುಮುರುವು ಆಗಿತ್ತು. ನಾನು ಸಪ್ಪೆ ಮುಖ ಮಾಡಿದೆ. ಅವಳು ಮತ್ತೆ ಗೆಲುವಿನ ನಗೆ ಬೀರಿದಳು.
ಆಗ ನಾನಿನ್ನೂ ಚಿಕ್ಕವಳು. ಐದಾರನೇ ಕ್ಲಾಸ್ ಓದ್ತಾ ಇದ್ದೆ. ಏಪ್ರಿಲ್ ಫೂಲ್ ಮಾಡಲು ಸಕಖ್ ಐಡಿಯಾ ಮಾಡಿದೆ. ‘ಅಜ್ಜಿ....ಅಜ್ಜಿ...ನಿಮ್ಮಣ್ಣ ಬಸಯ್ಯ ಸತ್ತರು’ ಅಂತ ನಾರಮ್ಮ ಹತ್ತಿರ ಹೋಗಿ ಹೇಳಿದ್ದೆ. ನಾರಮ್ಮ ಅವರು ‘ಅಯ್ಯೋ ಅಣ್ಣ. ನಿನ್ನೆ ಬೇಸಿದ್ದೆ. ಮಾತಾಡಿದೆ. ದೇವರು ಎಂತಹ ಸಾವು ತಂದನ್ನಲ್ಲಪ್ಪ’ ಅಂತ ಬಾಯಿ ಬಡಕೊಂತ ನಮ್ಮೂರು ತೂಲಹಳ್ಳಿಯಲ್ಲಿ ಓಣಿ ಓಣಿಯಲ್ಲಿ ಅಳುತ್ತಾ ಬಂದಾಗ ಕೆಲವೇ ನಿಮಿಷದಲ್ಲಿ ಇಡೀ ಊರ ಜನರಲ್ಲ ಅಲ್ಲಿ ಬಂದು ನೋಡಿದರೆ ಬಸಯ್ಯನವರು ಜಬರದಸ್ತಾಗಿ ಕೂತ್ತಿದ್ದರು. ‘ಅರೆ ನಾನು ಸತ್ತುಹೋದೆ ಅಂತ ಯಾರು ಹೇಳಿದ್ದು’ ಅಂದಾಗ, ಅದೇ ರಶ್ಮಿ ಅಂದಿದ್ದೆ ತಡ ಅಪ್ಪ, ಅಮ್ಮ, ಬಂಧುಗಳೆಲ್ಲ ಸೇರಿ ಸಿಕ್ಸ್, ಫೋರು, ಬೌಂಡ್ರಿ ಬಾರಿಸಿಬಿಟ್ರು. ಆ ಏಟುಗಳಿಗೆ ಎರಡು ದಿವಸ ಮಲಗಿದ್ದೆ. ಏಪ್ರಿಲ್ 1 ಬಂದಾಗಲೆಲ್ಲ ಈ ಘಟನೆ ನೆನಪಾಗಿ ನಗು- ಆಳು ಎರಡೂ ಬರುತ್ತೆ.
| ಸಿ.ಕೆ.ರಶ್ಮಿ ತೂಲಹಳ್ಳಿ (ಕೊಟ್ಟೂರು ತಾಲೂಕು)
| ಪಿ. ವಿಜಯ್ ಆನಂದ್ ಮೈಸೂರು
ಬೆಳಗಿನ ಜಾವ ಐದು ಗಂಟೆ. ನಾನು ಗಾಢ ನಿದ್ರೆಯಲ್ಲಿ ಮಲಗಿದ್ದೆ. ನನ್ನ ಅಣ್ಣ ಮಾರ್ನಿಂಗ್ ಶಿಫ್ಟ್ನಲ್ಲಿ ಫ್ಯಾಕ್ಟರಿಗೆ ಹೋಗುವ ತರಾತುರಿಯಲ್ಲಿ ಜೋರಾಗಿ ಕೂಗುತ್ತಾ ‘ನೋಡೋ ನೀನು ಮಲಗಿರುವ ಬೆಡ್ ಶೀಟ್ ಮೇಲೆ ಚೇಳು ಹರಿಯುತ್ತಿದೆ, ಹಾಗೆ ಇರು’ ಎಂದು ಕೂಗಿದರು. ನನಗೆ ಭಯವಾಗಿ ಹೊದ್ದುಕೊಂಡು ಮುದುರಿ ಮಲಗಿದ್ದೆ. ಎಷ್ಟು ಹೊತ್ತಾದರೂ ಪುನಃ ಅಣ್ಣನ ಧ್ವನಿ ಕೇಳಿಸಲಿಲ್ಲ. ಐದು ನಿಮಿಷ ಆದ ನಂತರ ನಿಧಾನವಾಗಿ ಕಣ್ತೆರೆದು ನೋಡಿದಾಗ ಅಲ್ಲಿ ನನ್ನ ಅಣ್ಣ ನಿಂತಿರಲಿಲ್ಲ, ಅಲ್ಲಿ ಒಂದು ಬೋರ್ಡ್ ಇತ್ತು. ಏಪ್ರಿಲ್ ಫೂಲ್ ಎಂದು. ಅಷ್ಟರಲ್ಲಾಗಲೇ ಒಂದು ಎರಡು ಎಲ್ಲಾ ಮಲಗಿದ್ದಲ್ಲಿಯೇ ಆಗಿತ್ತು.
| ಸೋ.ಫಾಲನೇತ್ರ ಬೆಂಗಳೂರು