ಜಿಪಂ ಸಭಾಂಗಣದಲ್ಲಿ ಸಿಇಒ ಸ್ನೇಹಲ್ ಲೋಖಂಡೆ ಕುಡಿಯುವ ನೀರಿನ ನಿರ್ವಹಣೆ ಕುರಿತು ಸಭೆ ನಡೆಸಿದರು. ರಾಜೇಂದ್ರ ಪ್ರಸಾದ್, ಜಿ.ಪೂರ್ಣಿಮಾ, ಡಾ. ನಟರಾಜ್, ಡಾ. ಒ.ಮಲ್ಲಪ್ಪ, ಸಿ.ಆರ್.ಪರಮೇಶ್ವಪ್ಪ ಇದ್ದರು. 
ನ್ಯೂಸ್

ಕುಡಿಯುವ ನೀರಿನ 159 ಕಾಮಗಾರಿಗೆ ಅನುಮೋದನೆ

ನವೀನ ಬಿ.ಎಂ

ಶಿವಮೊಗ್ಗ: ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತುರ್ತು ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಸಿದ ಅವರು, ವಿವಿಧ ಗ್ರಾಮಗಳಲ್ಲಿನ ಬೋರ್‌ವೆಲ್, ಪೈಪ್‌ಲೈನ್, ರಿ-ಡ್ರಿಲ್ ಸೇರಿ ಕುಡಿಯುವ ನೀರಿಗೆ ಸಂಬಂಧಿಸಿದ 2.72 ಕೋಟಿ ರೂ. ಮೊತ್ತದ 159 ಕಾಮಗಾರಿಗಳಿಗೆ ಅನುಮೋದನೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಮೇಲೆ ನಿಗಾ ವಹಿಸಬೇಕು. ಅಧಿಕಾರಿಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ನೀರಿನ ಸಮಸ್ಯೆ ಇದೆಯೇ ಎಂದು ಪರಿಶೀಲಿಸುತ್ತಿರಬೇಕು. ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಿಗೆ ಅಗತ್ಯವಿರುವ ಕಾಮಗಾರಿಗಳ ಕುರಿತು ತಾಲೂಕು ಟಾಸ್ಕ್‌ಫೋರ್ಸ್ ಸಮಿತಿ ಸಲ್ಲಿಸಿರುವ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಮಸ್ಯೆ ಇರುವ ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳ ಕಡೆ ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಂಡುಬಂದಲ್ಲಿ ಶೀಘ್ರ ಕ್ರಮ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಳಾಗಿರುವ ಆರ್‌ಒ ಪ್ಲಾಂಟ್‌ಗಳನ್ನು ತಕ್ಷಣ ರಿಪೇರಿ ಪಡಿಸಬೇಕು. ಎಲ್ಲ ಘಟಕಗಳೂ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಗ್ರಾಪಂಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸಮಸ್ಯೆಗಳು ಬಾರದಂತೆ ತಡೆಯಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಇದೊಂದು ಉತ್ತಮ ಯೋಜನೆ. ಯಾವುದಾದರೂ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಈ ಕೂಡಲೇ ಪಟ್ಟಿ ಮಾಡಿ ಕೊಡಬೇಕು. ಎಲ್ಲಿ ಕುಡಿಯುವ ನೀರಿನ ಅಗತ್ಯ ಇದೆಯೋ ಅಲ್ಲಿ ಕೆಲಸಗಳು ಶೀಘ್ರ ಆಗಬೇಕು. ಕೃಷಿ ಜಂಟಿ ನಿರ್ದೇಶಕರು ಸಹ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಪೂರ್ಣಿಮಾ, ಡಿಎಚ್‌ಒ ಡಾ. ನಟರಾಜ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತ ರಾಜೇಂದ್ರ ಪ್ರಸಾದ್, ಡಿಎಸ್‌ಒ ಡಾ. ಒ.ಮಲ್ಲಪ್ಪ, ಡಿಡಿಪಿಐ ಸಿ.ಆರ್.ಪರಮೇಶ್ವಪ್ಪ ಇತರರಿದ್ದರು.

ತಾಪ ನಿರ್ವಹಣೆಗೆ ಕ್ರಿಯಾಯೋಜನೆ
ಬೇಸಿಗೆಯಲ್ಲಿ ಉಷ್ಣಾಂಶ ಏರುತ್ತಿದ್ದು, ಆರೋಗ್ಯ ಇಲಾಖೆಯಿಂದ ಜಿಲ್ಲಾದ್ಯಂತ ತಾಪ ನಿರ್ವಹಣೆ ಕುರಿತಾದ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ತಾಪ ನಿರ್ವಹಿಸಲು ಏನೇನು ಕ್ರಮ ಕೈಗೊಳ್ಳಬೇಕು? ಸಾರ್ವಜನಿಕರು ಏನು ಮಾಡಬೇಕು, ಮಾಡಬಾರದು? ಎಂಬ ಕುರಿತಾದ ಪೋಸ್ಟರ್‌ಗಳನ್ನು ಸಿದ್ಧಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಬಿಸಿ ಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಡಿಎಚ್‌ಒ ಡಾ. ನಟರಾಜ್ ಅವರಿಗೆ ಸ್ನೇಹಲ್ ಲೋಖಂಡೆ ಸೂಚನೆ ನೀಡಿದರು.