ನ್ಯೂಸ್

₹ 3,587 ಕೋಟಿ ಬಂಡವಾಳ ಹೂಡಿಕೆಯ 64 ಯೋಜನೆಗಳಿಗೆ ಅನುಮೋದನೆ

ಬೆಂಗಳೂರು: ಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ ಇಂಡಿಯಾ, ರಿವರ್‌ ಮೊಬಿಲಿಟಿ, ವೆಗಾ ಆಟೊ ಆ್ಯಕ್ಸೆಸರೀಸ್‌, ಮಿರ್ರಾ ಆ್ಯಂಡ್‌ ಮಿರ್ರಾ ಇಂಡಸ್ಟ್ರೀಸ್‌, ಸೇರಿದಂತೆ ಒಟ್ಟಾರೆ 64 ಯೋಜನೆಗಳ ₹3,587 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಶುಕ್ರವಾರ ನಡೆದ 146 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಅನುಮೋದನೆ ಪಡೆದ ಯೋಜನೆಗಳಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ವಿದ್ಯುತ್‌ ಉತ್ಪಾದನಾ ಕೇಂದ್ರ ಹಾಗೂ ಹಾಲು ಉತ್ಪಾದನಾ ಘಟಕಗಳು ಸೇರಿವೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ 13,896 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಹಾವೇರಿ, ಗದಗ, ಮೈಸೂರು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ದೊರೆಯಲಿರುವುದರ ಜೊತೆಗೆ ಹೊಸ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ.

ಅನುಮೋದಿತ ಯೋಜನೆಗಳು

ʼಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ದೇವನಹಳ್ಳಿ ಬಳಿ ₹ 390 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿರುವ ಪ್ರೈಮರಿ ಸೆಲ್ಸ್‌ ಆ್ಯಂಡ್‌ ಬ್ಯಾಟರೀಸ್‌ ಘಟಕವು 300 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಿದೆ. ಬೆಂಗಳೂರು ಮೂಲದ ರಿವರ್‌ ಮೊಬಿಲಿಟಿ ಪ್ರೈವೇಟ್‌ ಲಿಮಿಟೆಡ್‌ ನವೋದ್ಯಮವು ಹೊಸಕೋಟೆ ಬಳಿ ₹ 306.9 ಕೋಟಿ ವೆಚ್ಚದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲಿದೆ. ಇದರಿಂದ 690 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

ವೆಗಾ ಆಟೊ ಆ್ಯಕ್ಸೆಸರೀಸ್‌ ಪ್ರೈವೇಟ್‌ ಲಿಮಿಟೆಡ್‌ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ಇಪಿಎಸ್‌ ಲೀನರ್‌ ತಯಾರಿಕಾ ಘಟಕ ಸ್ಥಾಪಿಸಲು ₹205 ಕೋಟಿ ವೆಚ್ಚ ಮಾಡಲಿದೆ. ಮಿರ್ರಾ ಆ್ಯಂಡ್‌ ಮಿರ್ರಾ ಇಂಡಸ್ಟ್ರೀಸ್‌ ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಉಕ್ಕಿನ ತಂತಿ ಸಂಸ್ಕರಣಾ ಘಟಕ ಸ್ಥಾಪಿಸಲು ₹ 200 ಕೋಟಿ ವೆಚ್ಚ ಹೂಡಿಕೆ ಮಾಡಲಿರುವುದು ಪ್ರಮುಖ ಯೋಜನೆಗಳಾಗಿವೆʼ ಎಂದು ಸಚಿವ ಎಂ. ಬಿ. ಪಾಟೀಲ ಅವರು ಸಭೆಯ ನಂತರ ಮಾಹಿತಿ ನೀಡಿದರು.