ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯಲಾಗಿದೆ ಎಂದು ಆರೋಪಿಸಿ ಹರಮಘಟ್ಟ ರಂಗಪ್ಪ, ಶಿವಕುಮಾರ್, ನಾಗರಾಜ್, ಲೋಕೇಶ್ ಮುಂತಾದವರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಜಾಗೃತಿ ಸಮಿತಿಗೆ ನೇಮಕ ನಿಯಮಬಾಹಿರ:ಆರೋಪ

ಶಿವಮೊಗ್ಗ: ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ನಾಮ ನಿರ್ದೇಶನ ಮಾಡುವಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯಲಾಗಿದೆ. ನಿವೃತ್ತ ಸರ್ಕಾರಿ ನೌಕರರನ್ನೂ ನೇಮಕ ಮಾಡಲಾಗಿದೆ. ಇಡೀ ಪ್ರಕ್ರಿಯೆ ಕಾನೂನುಬಾಹಿರ ಎಂದು ಆರೋಪಿಸಿ ಡಿಎಸ್‌ಎಸ್ ಹಾಗೂ ದಲಿತ ವಿಮೋಚನಾ ಸೇನೆ ಕಾರ್ಯಕರ್ತರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಮಿತಿಗೆ ನಾಮನಿರ್ದೇಶನಗೊಂಡವರ ಬಗ್ಗೆ ಪೊಲೀಸ್ ಇಲಾಖೆಯ ಪರಿಶೀಲನೆ ಬಾಕಿ ಇರುವಾಗಲೇ ರಾಜಕೀಯ ಒತ್ತಡಕ್ಕೆ ಮಣಿದು ಆಯ್ಕೆ ಮಾಡಲಾಗಿದೆ. ನೇಮಕವಾದವರು ಯಾವ ಸಮಾಜ ಸೇವೆಯನ್ನೂ ಸಲ್ಲಿಸಿಲ್ಲ. ಕೆಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಚಾರ್ಯರಾಗಿ ನಿವೃತ್ತಗೊಂಡವರು, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರನ್ನೂ ನಾಮನಿರ್ದೇಶನ ಮಾಡಲಾಗಿದೆ. ಇಂಥವರನ್ನು ನಾಮನಿರ್ದೇಶನ ಮಾಡಿರುವುದು ಸರಿಯಲ್ಲ. ಇಲ್ಲಿ ಅಧಿಕಾರಿಗಳ ಕಾರ್ಯಲೋಪವೂ ಇದೆ ಎಂದು ದೂರಿದರು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರಂಗಪ್ಪ, ಪ್ರಮುಖರಾದ ಅರುಣ್‌ಕುಮಾರ್, ಎಚ್.ಎನ್.ಪ್ರಭು, ತೇಜಸ್, ಸಿ.ಮೂರ್ತಿ, ಸುನೀತಾ ರಾಜ್, ತಿಪ್ಪೇಸ್ವಾಮಿ, ಕುಮಾರ್, ಎಂ.ಆರ್.ಶಿವಕುಮಾರ್, ನಾಗರಾಜ್, ವಿ.ವೆಂಕಟೇಶ್, ಲೋಕೇಶ್ ಇತರರಿದ್ದರು.