ಮಂಗಳೂರು: ಗಡಿನಾಡು ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಕನ್ನಡ ವಿಭಾಗಕ್ಕೆ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಲಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದ ಹೋರಾಟಕ್ಕೆ ಇದೀಗ ಕೇರಳ ಹೈಕೋರ್ಟ್‌ನಲ್ಲಿ ಮಹತ್ವದ ಜಯ ಲಭಿಸಿದೆ.
ಗಡಿಭಾಗ ಕಾಸರಗೋಡು ಜಿಲ್ಲೆಯ ಅಡೂರು ಪ್ರಾಥಮಿಕ ಶಾಲೆಗೆ ಮಲಯಾಳ ಶಿಕ್ಷಕಿ ನೇಮಕ ಮಾಡಲಾಗಿತ್ತು. ಕನ್ನಡ ತಿಳಿಯದ ಶಿಕ್ಷಕಿ ನೇಮಿಸಿದ್ದಕ್ಕೆ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು. ಎರಡು ತಿಂಗಳಿನಿಂದ ಪ್ರತಿಭಟನೆ ನಡೆದಿದ್ದು ಕೊನೆಗೆ, ಪೋಷಕರು ಈ ಕುರಿತು ಕೇರಳ ಹೈಕೋರ್ಚ್ ಮೆಟ್ಟಿಲೇರಿದ್ದರು.
ಕನ್ನಡ ಮಕ್ಕಳಿಗೆ ಮಲಯಾಳಿ ಶಿಕ್ಷಕಿ ನೇಮಿಸಿ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಕಾಸರಗೋಡು ಜಿಲ್ಲೆಯ ಹಲವೆಡೆ ಕನ್ನಡ ಶಾಲೆಗಳಲ್ಲಿ ಅನ್ಯಾಯ ಎಸಗಲಾಗುತ್ತಿದೆ ಎನ್ನುವ ಪೋಷಕರ ಕಡೆಯ ವಾದ ಪುರಸ್ಕರಿಸಿದ ಕೇರಳ ಹೈಕೋರ್ಟ್ ಕೊನೆಗೆ ತೀರ್ಪು ಪ್ರಕಟಿಸಿದೆ.
ಇದೀಗ ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪನ್ನು ಮಲಯಾಳ ಭಾಷಿಕ ಶಿಕ್ಷಕರು ನೇಮಕಗೊಂಡಿರುವ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ವಯಿಸುವಂತೆ ವಾದ ಮಂಡಿಸಿದ್ದರು.
ಕನ್ನಡ ಶಾಲೆಗೆ ಮಲಯಾಳ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಕೇರಳ ಸರ್ಕಾರ, ಶಿಕ್ಷಣ ಇಲಾಖೆಗೆ ಚಾಟಿ ಬೀಸಿದ ಉಚ್ಛ ನ್ಯಾಯಾಲಯ ತಕ್ಷಣವೇ ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ನೀಡಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಪೋಷಕರ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ.
ಇದನ್ನೂ ಓದಿ: ನಿಲ್ಲದ ರೀಲ್ಸ್ ಸ್ಟಾರ್ ವಿನೀತನ ಪುಂಡಾಟ: ಮೊದಲು ರೇಪ್, ನಂತ್ರ ಸುಲಿಗೆ, ಇದೀಗ ಚಿನ್ನಾಭರಣ ಪಡೆದು ಅತ್ಯಾಚಾರ
ಅನೇಕ ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಕೇರಳ ಲೋಕಸೇವಾ ಆಯೋಗಕ್ಕೆ ಈ ತೀರ್ಪು ಚಾಟಿ ಬೀಸಿದಂತಾಗಿದೆ.