ನ್ಯೂಸ್

ಎಲ್​ಐಸಿಗೆ ಇಸಿ ಸದಸ್ಯರ ನೇಮಕ: ಸರ್ಕಾರ ನಿಯಮ ಉಲ್ಲಂಘಿಸಿದ ವಿಟಿಯು

ಬೆಂಗಳೂರು: ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಸ್ಥಳೀಯ ವಿಚಾರಣಾ ಸಮಿತಿ (ಎಲ್​ಐಸಿ) ಕಾರ್ಯಕಾರಿ ಪರಿಷತ್ತಿನ (ಇಸಿ) ಸದಸ್ಯರ ನೇಮಕ ಮಾಡಲು ಮುಂದಾಗಿದೆ.

ಉನ್ನತ ಶಿಕ್ಷಣ ಇಲಾಖೆ 2017ರಲ್ಲಿ ಆದೇಶ ಹೊರಡಿಸಿ ಸಿಂಡಿಕೇಟ್ ಸದಸ್ಯರನ್ನು ವಿಶ್ವವಿದ್ಯಾಲಯದ ಎಲ್​ಐಸಿ ಸಮಿತಿ ನೇಮಕ ಮಾಡಬಾರದು ಎಂದು ಆದೇಶ ಹೊರಡಿಸಿತ್ತು. ಆದರೆ, ಇದು ತಾಂತ್ರಿಕ ವಿವಿಗೆ ಅನ್ವಯಿಸುತ್ತದೆಯೇ ಎಂದು ವಿಟಿಯು ಸರ್ಕಾರವನ್ನು ಕೇಳಿತ್ತು. ಇದಕ್ಕೆ ಉನ್ನತ ಶಿಕ್ಷಣ ಇಲಾಖೆ. ‘ಹೌದು.. ತಾಂತ್ರಿಕ ವಿವಿಗೂ ಇದೇ ನಿಯಮ ಅನ್ವಯವಾಗಲಿದೆ’ ಎಂದು ಸ್ಪಷ್ಟಪಡಿಸಿ ಕುಲಸಚಿವರಿಗೆ ಪತ್ರ ಬರೆದು ತಿಳಿಸಿತ್ತು.

ಆದರೆ, ವಿಟಿಯು ಈ ನಿಯಮಗಳನ್ನು ಉಲ್ಲಂಘಿಸಿ ಮನಸೋ ಇಚ್ಛೆ ಕಾರ್ಯಕಾರಿ ಪರಿಷತ್ತಿನ ಸದಸ್ಯರನ್ನು ಎಲ್​ಐಸಿ ಸಮಿತಿಯಲ್ಲಿ ಸೇರಿಸಿ ಪಟ್ಟಿ ತಯಾರು ಮಾಡಿದೆ. 50-60 ತಂಡಗಳನ್ನು ರಚಿಸಿದ್ದು, ಕಾಲೇಜುಗಳ ಭೇಟಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಮುಂದಿನ ವಾರದಲ್ಲಿ ತಂಡಗಳು ಕಾಲೇಜಿಗೆ ಭೇಟಿ ನೀಡಿ ಪರಿಶೀಲನಾ ವರದಿ ತಯಾರಿಸಲಿವೆ.

ವಿವಿಯ ವ್ಯಾಪ್ತಿಯಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿವೆ. ಈ ಕಾಲೇಜುಗಳು ಪ್ರತಿ ವರ್ಷ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಣ ಮಾಡಿಕೊಳ್ಳುತ್ತವೆ. ಅಗತ್ಯ ಮೂಲಸೌಕರ್ಯ ಇಲ್ಲವಾದರೆ ಅಂತಹ ಕಾಲೇಜಿನ ಮಾನ್ಯತೆ ರದ್ದು ಮಾಡುವ ಅಧಿಕಾರ ಎಲ್​ಐಸಿಗಿದೆ. ಶೀಘ್ರದಲ್ಲೇ ತಂಡ ನಿಮ್ಮ ಕಾಲೇಜುಗಳಿಗೆ ಭೇಟಿ ನೀಡಲಿದ್ದು, ಏನೆಲ್ಲಾ ಮಾರ್ಗಸೂಚಿನಗಳನ್ನು ಅನುಸರಿಸಬೇಕೆಂದು ಕಾಲೇಜುಗಳಿಗೆ ಚೆಕ್​ಲೀಸ್ಟ್ ರೂಪಿಸಿ ತನ್ನ ವೆಬ್​ಸೈಟ್​ನಲ್ಲಿ ವಿಟಿಯು ಪ್ರಕಟಿಸಿದೆ.

ಏಕೆ ಸೇರಿಸಬಾರದು: ಸಿಂಡಿಕೇಟ್ ಸದಸ್ಯರು ಎಲ್​ಐಸಿ ಸಮಿತಿ ಕಾರ್ಯಗಳಲ್ಲಿ ಭಾಗಿಯಾಗಿ ಅದು ನೀಡುವ ವರದಿ ಬಗ್ಗೆ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಿಂದ ಇಡೀ ಪ್ರಕ್ರಿಯೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿರಲು ಸಾಧ್ಯವಿರುವುದಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

2017ರ ಜ. 16ರಂದು ಎಲ್​ಐಸಿ ರಚನೆ ಸಂಬಂಧ ಹೊಸ ಆದೇಶ ರೂಪಿಸಲಾಗಿದೆ. ಆ ಪ್ರಕಾರವಾಗಿ ಸಾಮಾಜಿಕ, ನೈಸರ್ಗಿಕ ನ್ಯಾಯದ ಪರಿಪಾಲನೆಯಿಂದಾಗಿ ಶೈಕ್ಷಣಿಕ ಹಿರಿಮೆಯನ್ನು ಸಾಧಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ವೃದ್ಧಿಸಲು ಅವಶ್ಯಕವಾದ ನ್ಯಾಯೋಜಿತ, ಪಾರದರ್ಶಕ ಹಾಗೂ ನಿಪಕ್ಷಪಾತ ಸಂಯೋಜನೆ ಪ್ರಕ್ರಿಯೆ ರೂಪಿಸಲು ಸ್ಥಳೀಯ ವಿಚಾರಣಾ ಸಮಿತಿಗಳಿಗೆ ವಿಷಯ ಪಾರಂಗತರನ್ನು ಹಾಗೂ ಶೈಕ್ಷಣಿಕ ತಜ್ಞರನ್ನು ನೇಮಿಸುವ ಕುರಿತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ಕಾರ ತಿಳಿಸಿದೆ.

ಎಲ್​ಐಸಿ ಸದಸ್ಯರ ನೇಮಕ ಪ್ರಕ್ರಿಯೆ ಜಾರಿಯಲ್ಲಿದೆ. ಕಾರ್ಯಕಾರಿಣಿ ಪರಿಷತ್ತಿನ ಸದಸ್ಯರನ್ನು ಎಲ್​ಐಸಿಗೆ ನೇಮಕ ಮಾಡಿಕೊಳ್ಳಬಾರದು ಎಂದು ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. | ಡಾ.ಎ.ಎಸ್.ದೇಶಪಾಂಡೆ ಕುಲಸಚಿವ

ಬುದ್ಧಿ ಕಲಿಯದ ವಿಟಿಯು

ಸಿಂಡಿಕೇಟ್ ಸದಸ್ಯರು ಕಾಲೇಜುಗಳ ಮಾನ್ಯತೆ ನವೀಕರಿಸುವುದಕ್ಕೆ ಹೆಚ್ಚಿನ ಲಂಚ ಪಡೆಯುತ್ತಾರೆ ಎಂಬ ಆರೋಪ ಇದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕಾರ್ಯಕಾರಿ ಮಂಡಳಿಯ ಸದಸ್ಯರೊಬ್ಬರು ಖಾಸಗಿ ಕಾಲೇಜಿಗೆ ಮಾನ್ಯತೆ ನವೀಕರಿಸಲು 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಸರ್ಕಾರ ಸಮಿತಿ ರಚನೆ ಮಾಡಿ ವರದಿ ಪಡೆದಿತ್ತು. ವರದಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಸದಸ್ಯತ್ವ ಹುದ್ದೆಯಿಂದ ವಜಾಗೊಳಿಸಿತ್ತು. ಇಷ್ಟೆಲ್ಲಾ ಸಾಬೀತುಗೊಂಡರೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾತ್ರ ಕಾರ್ಯಕಾರಿ ಸದಸ್ಯರನ್ನು ಐಎಲ್​ಸಿಗೆ ನೇಮಕ ಮಾಡುತ್ತಲೇ ಇದೆ.

| ದೇವರಾಜ್ ಎಲ್