ಅರಳಗೋಡು ಪಿಎಚ್‌ಸಿಗೆ ಭೇಟಿ ನೀಡಿದ ಡಿಎಚ್‌ಒ ಡಾ. ನಟರಾಜ್ ಅವರು ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಡಾ. ಸುರೇಶ್, ಡಾ. ತುಷಾರ್, ಪುಷ್ಪಾ ಇದ್ದರು.  
ನ್ಯೂಸ್

ಅರಳಗೋಡು ಪಿಎಚ್‌ಸಿಗೆ ವೈದ್ಯರ ನಿಯೋಜನೆ

ಕಾರ್ಗಲ್: ಮಂಗನ ಕಾಯಿಲೆ ಬಾಧಿತ ಪ್ರದೇಶವಾದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಎಫ್‌ಡಿ ಸೋಂಕಿನ ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಸ್.ನಟರಾಜ್ ಹೇಳಿದರು.

ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಕೆಎಫ್‌ಡಿ ಸೋಂಕು ಹರಡದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಮಾತನಾಡಿದರು.

ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ವೈದ್ಯರಿಲ್ಲದ ಕಾರಣಕ್ಕೆ ಕಾರ್ಗಲ್ ಆರೋಗ್ಯ ಕೇಂದ್ರದಲ್ಲಿ ಕಾಯಂ ಆಗಿ ನಿಯೋಜನೆಗೊಂಡ ಡಾ. ತುಷಾರ್ ಅವರನ್ನು ಮಂಗಳವಾರ, ಶುಕ್ರವಾರ ಮತು ಶನಿವಾರ ವಾರದ ಮೂರು ದಿನಗಳ ಕಾಲ ಅರಳಗೋಡಿನಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕಡ್ಡಾಯ ಗ್ರಾಮೀಣ ಸೇವೆಯಡಿ ಹೊಸದಾಗಿ ಇಲಾಖೆಗೆ ನೇಮಕವಾಗುವ ವೈದ್ಯರೊಬ್ಬರನ್ನು ಶೀಘ್ರವೇ ಇಲ್ಲಿಗೆ ಕಾಯಂ ಆಗಿ ನಿಯೋಜಿಸಲಾಗುವುದು ಎಂದು ತಿಳಿಸಿದರು.

ಈ ವ್ಯಾಪ್ತಿಯಲ್ಲಿ ರೋಗದ ಯಾವುದೇ ಲಕ್ಷಣಗಳು ಇದುವರೆಗೂ ಕಂಡುಬಂದಿಲ್ಲ. ಒಂದುವೇಳೆ ಗೋಚರಿಸಿದರೆ ಕೂಡಲೇ ಆ ವ್ಯಕ್ತಿಯ ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಬೇಕು. ಅರಳಗೋಡು ಆಸ್ಪತ್ರೆಯಲ್ಲಿ ಔಷಧ ಕೊರತೆಯಿಲ್ಲ. ಮುಖ್ಯವಾಗಿ ಕೆಎಫ್‌ಡಿ ಸೋಂಕಿನಿಂದ ಬರುವ ಜ್ವರ, ನೆಗಡಿ, ಮೈ-ಕೈ ನೋವಿಗೆ ಸಂಬಂಧಿಸಿ ನೀಡುವ ಔಷಧ ಲಭ್ಯವಿದೆ ಎಂದರು.

ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳುವ ಮೂಲಕ ಜ್ವರ ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ಅರಳಗೋಡು ಪಂಚಾಯಿತಿ ವ್ಯಾಪ್ತಿಯ ಉಪಕೇಂದ್ರದಡಿ ಸೇವೆ ಸಲ್ಲಿಸುತ್ತಿರುವ ನಾಲ್ಕು ಮಂದಿ ಪಿಎಚ್‌ಸಿಒಗಳು ಅರಳಗೋಡು ಆಸ್ಪತ್ರೆಯಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಸದ್ಯಕ್ಕೆ ಸಿಬ್ಬಂದಿ ಕೊರತೆಯಿಲ್ಲ. ಈ ಭಾಗದಲ್ಲಿನ ಜನರು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಅರಣ್ಯ ಪ್ರದೇಶ ಹಾಗೂ ಕೊಟ್ಟಿಗೆಗೆ ತೆರಳುವ ಸಂದರ್ಭ ಕಡ್ಡಾಯವಾಗಿ ಡಿಪಾ ತೈಲವನ್ನು ಲೇಪಿಸಿಕೊಂಡು ಹೋಗಬೇಕು. ಈಗಾಗಲೇ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ತೈಲ ವಿತರಿಸುತ್ತಿದ್ದಾರೆ. ಆದರೆ ನಾಲ್ಕೈದು ಜನರಿರುವ ಮನೆಗಳಲ್ಲಿ ಇದು ಸಾಲುತ್ತಿಲ್ಲ ಎಂಬ ಮಾಹಿತಿ ಬಂದಿದೆ. ಹೆಚ್ಚುವರಿ ಬಾಟಲ್ ಬೇಕಾದರೆ ಆಸ್ಪತ್ರೆಗೆ ತೆರಳಿ ಪಡೆಯಬಹುದು. ಕಾಡಿನಲ್ಲಿ ಮಂಗ ಸತ್ತಿದ್ದು ಕಂಡುಬಂದರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತುಷಾರ್ ತಿಳಿಸಿದರು. ಕಾರ್ಗಲ್ ಪ್ರಾಥಮಿಕ ಆರೋಗ್ಯಕ್ಕೂ ಬೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಆಸ್ಪತ್ರೆಯಲ್ಲಿ ಹಣ ಪಾವತಿ ಆಂಬುಲೆನ್ಸ್ ಹಾಗೂ ಚಾಲಕ ಸಿಬ್ಬಂದಿ ನಿರಂತರವಾಗಿ ಲಭ್ಯವಿದ್ದು, ಇದನ್ನು ಸಾರ್ವಜನಿಕರಿಗೆ ಕಾಣುವಂತೆ ಆಸ್ಪತ್ರೆ ಎದುರು ನಿಲ್ಲಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಸಾಗರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್, ಶುಶ್ರೂಷಕಿ ಪುಷ್ಪಾ, ಭರತ್ ವಾಟೆಮಕ್ಕಿ ಹಾಜರಿದ್ದರು.