ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಸಂಬಂಧ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ನೆರವಾಗಲು ಹಿರಿಯ ವಕೀಲೆ ಎಸ್. ಸುಶೀಲಾ ಅವರನ್ನು ಅಮೈಕಸ್ ಕ್ಯೂರಿಯನ್ನಾಗಿ ಹೈಕೋರ್ಟ್ ನೇಮಕ ಮಾಡಿ ಆದೇಶಿಸಿದೆ.
ಪ್ರಕರಣ ಕುರಿತಾಗಿ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಡಿಎನ್‌ಎ ಮತ್ತು ಆರ್‌ಸಿಬಿ ಪರ ವಕೀಲರು ಈ ಹಿಂದಿನ ವಿಚಾರಣೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡುವಂತೆ ಮನವಿ ಮಾಡಿದರು.
ವಿಚಾರಣೆ ವೇಳೆ ಹಾಜರಿದ್ದ ಮಧ್ಯಂತರ ಅರ್ಜಿ ಸಲ್ಲಿಸಿರುವ ವಕೀಲರು, ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿರುವ ಅರ್ಜಿಯನ್ನು ಈ ಅರ್ಜಿಯೊಂದಿಗೆ ವಿಚಾರಣೆ ನಡೆಸಬೇಕು ಎಂದು ಕೋರಿದರು. ಮತ್ತೊಂದು ಮಧ್ಯಂತರ ಅರ್ಜಿಯ ಪರ ವಕೀಲರು, ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಇದೀಗ ಅಮಿಕಸ್ ಕ್ಯೂರಿ ನೇಮಕ ಮಾಡಿದ್ದು, ಅವರು ವಾದ ಮಂಡಿಸಲಿದ್ದಾರೆ. ಜತೆಗೆ ಎಲ್ಲ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲಿರುವುದಾಗಿ ತಿಳಿಸಿತು. ಜತೆಗೆ ವಕೀಲರಾದ ಸುಶೀಲಾ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಅದರ ಕುರಿತ ಎಲ್ಲ ದಾಖಲೆಗಳ ಮತ್ತು ಸರ್ಕಾರ ಈವರೆಗೂ ಸಲ್ಲಿಸಿರುವ ವಸ್ತುಸ್ಥಿತಿ ವರದಿಯನ್ನು ಒದಗಿಸಲು ರಿಜಿಸ್ಟ್ರಾರ್ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನು ಜು. 1ಕ್ಕೆ ಮುಂದೂಡಿದೆ.