ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಅಲಿಯಾಸ್ ಆರ್.ಡಿ.ಪಾಟೀಲ್ ವಿರುದ್ಧದ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಿವಿಧ ಕಡೆ ದಾಖಲಾಗಿರುವ 11 ಎಫ್‌ಐಆರ್ ಮತ್ತು ಆರೋಪ ಪಟ್ಟಿಯನ್ನು ವಿಲೀನಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಕಲಬುರ್ಗಿ ಪೀಠ ವಜಾ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ನೇತೃತ್ವದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿದೆ. ಇದರೊಂದಿಗೆ ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿ 2023ರ ಏ.17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಕಲಬುರ್ಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ಐದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಎರಡು, ಚೌಕ್ ಠಾಣೆಯಲ್ಲಿ ಒಂದು ಹಾಗೂ ಧಾರವಾಡದ ಸಬ್ ಅರ್ಬನ್, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್‌ಐಆರ್ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್.ಡಿ.ಪಾಟೀಲ್ ಕೋರಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎನ್.ಜಗದೀಶ್ ಆರೋಪಿಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಅಪರಾಧ ಕೃತ್ಯಗಳು ಬೇರೆಬೇರೆ ಇವೆ. ಅಪರಾಧ ವರದಿಯಾಗಿರುವ ಸ್ಥಳವೂ ಬೇರೆಬೇರೆಯಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳೂ ಬೇರೆಬೇರೆಯಾಗಿದ್ದಾರೆ. ಆರ್.ಡಿ.ಪಾಟೀಲ್ ಎಲ್ಲ ಪ್ರಕರಣಗಳಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಂದೇ ಪ್ರಕರಣವನ್ನಾಗಿ ಮಾಡಲಾಗದು. ನಾಲ್ಕು ಜಿಲ್ಲೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ವಾದಿಸಿದ್ದರು.
ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಪ್ರಧಾನ ಪ್ರಕರಣದಲ್ಲಿ ಅರ್ಜಿದಾರ ಆರ್.ಡಿ.ಪಾಟೀಲ್ ಅವರನ್ನು 14ನೇ ಆರೋಪಿಯನ್ನಾಗಿಸಲಾಗಿದೆ. ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಆರ್.ಡಿ.ಪಾಟೀಲ್ ಬಂಧನವಾಗಿದೆ.