ಕೃಷ್ಣೆಯ ಅಬ್ಬರಕ್ಕೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ನದಿ ತೀರದಲ್ಲಿ ಕಬ್ಬು ಬೆಳೆ ಜಲಾವೃತವಾಗಿರುವುದು. 
ನ್ಯೂಸ್

ಮಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊರೆ

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಮಹಾರಾಷ್ಟ್ರದ ಭೀಮಾ ನದಿ ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ ಕೋರಿ ಅಕ್ಟೋಬರ್ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಶುರುವಾದ ಮುಂಗಾರು ಹಂಗಾಮಿನಲ್ಲಿ ಭರ್ಜರಿ ಮಳೆಯಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಧಾರಾಕಾರ ಮಳೆ ಸುರಿದಿದ್ದರಿಂದ 5.29 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕ ಬೆಳೆಗಳು ನಷ್ಟವಾಗಿದ್ದವು. ಬೆಳೆ ಹಾನಿಗೊಂಡ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಸೆಪ್ಟೆಂಬರ್ ಅಂತ್ಯದಲ್ಲಿ ಮತ್ತೆ ಸುರಿದ ಭಾರಿ ಮಳೆ ಹಾಗೂ ಮಹಾರಾಷ್ಟ್ರ ಭಾಗದ ಜಲಾಶಯಗಳಿಂದ ಹೊರ ಬಿಡಲಾದ ನೀರಿನಿಂದ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 7.24 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ. ಮತ್ತೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಿರುವ ರಾಜ್ಯ ಸರ್ಕಾರ, 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿಯನ್ನು ಅಂದಾಜು ಮಾಡಿದ್ದು, ಸರ್ವೇ ಕಾರ್ಯ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎ್) ಅನ್ವಯ ಅ.3ನೇ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಿ ಪತ್ರ ಬರೆಯಲಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮತ್ತೆ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ರಾಜಕೀಯ ಸಂಘರ್ಷ ಉಂಟುಮಾಡುವ ಸಾಧ್ಯತೆಗಳು ಇರುವುದಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.

2023ರಲ್ಲಿ ಮಳೆ ಕೊರತೆಯಿಂದಾಗಿ 216 ತಾಲೂಕಿನಲ್ಲಿ ಬರ ಉಂಟಾಗಿತ್ತು. ಆಗ ರಾಜ್ಯ ಸರ್ಕಾರ ಎನ್‌ಡಿಆರ್‌ಎ್ ಮಾರ್ಗಸೂಚಿ ಪ್ರಕಾರ 18,171 ಕೋಟಿ ರೂ. ಪರಿಹಾರ ನೀಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ, ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಪರಿಣಾಮ ರಾಜ್ಯದಿಂದ ನಿಯೋಗ ಸಹ ಹೋಗಿ ಕೊನೆಗೆ ಪ್ರಯೋಜನವಾಗದೆ ಇದ್ದಾಗ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಕೊನೆಗೆ ಕೇಂದ್ರ ಸರ್ಕಾರ 18,171 ಕೋಟಿ ರೂ. ಪರಿಹಾರ ಕೋರಿಕೆಗೆ ಕೇವಲ 3,500 ಕೋಟಿ ರೂ. ಬಿಡುಗಡೆ ಮಾಡಿ ಸುಮ್ಮನಾಗಿತ್ತು.

ಇದೀಗ ರಾಜ್ಯದಲ್ಲಿ 12.54 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಮತ್ತು ಆಸ್ತಿಪಾಸ್ತಿ, ಮೂಲಸೌಕರ್ಯಗಳು ಹಾನಿ ಉಂಟಾಗಿದೆ. ಆದರಿಂದ ಜಂಟಿ ಸರ್ವೇ ಮುಗಿದ ಕೂಡಲೇ ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಿ ಪತ್ರ ಬರೆಯಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿ (ಹೇಕ್ಟೆರ್‌ಗಳಲ್ಲಿ

ಜಿಲ್ಲೆ                ಮೊದಲ ಜಂಟಿ ಸರ್ವೇ                2ನೇ ಜಂಟಿ ಸರ್ವೇ     ಒಟ್ಟು

ಕಲುಬುರಗಿ         1,05,967                           1,91,875                  2,97,842

ವಿಜಯಪುರ        22,268                            2,23,566                    2,45,834

ಬೀದರ್              79,887                              86,186                    1,66,073

ಯಾದಗಿರಿ             0                                    1,18,186                    1,18,186

ಧಾರವಾಡ          93,497                             4,133                         97,630

ರಾಜ್ಯದಲ್ಲಿ ವಿಕೋಪದಿಂದ ಉಂಟಾದ ನಷ್ಟ(ಕೋಟಿ ರೂ.ನಲ್ಲಿ)

ನೈಸರ್ಗಿಕ ವಿಕೋಪ                   ಅಂದಾಜು ನಷ್ಟ               ಎಸ್‌ಡಿಆರ್‌ಎ್ ಅನುಸಾರ

2023ರ ಮುಂಗಾರು                   35,162                              18,171

2018ರ ಮುಂಗಾರು                    16,662                               2,434

2018ರ ಹಿಂಗಾರು                      11,384                               2,064

2016ರ ಮುಂಗಾರು                      17,193                                 4,702

ಅತಿವೃಷ್ಟಿಯಿಂದಾದ ಹಾನಿ

-651 ಮನೆಗಳು ಸಂಪೂರ್ಣ, 9087 ಮನೆಗಳು ಭಾಗಶಃ ಹಾನಿ

-6,83 ಕಿಮೀ ರಾಜ್ಯ ಹೆದ್ದಾರಿ, 1,383 ಕಿ.ಮೀ. ಜಿಲ್ಲಾ ಪ್ರಮುಖ ಹೆದ್ದಾರಿ ಹಾಳು

-5,558 ಗ್ರಾಮೀಣ ರಸ್ತೆಗಳು, 656 ಸೇತುವೆಗಳು ಕುಸಿತ

-1,877 ಶಾಲಾ ಕಟ್ಟಡಗಳು, 160 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿ

-1,018 ಅಂಗನವಾಡಿಗಳು, 25,279 ವಿದ್ಯುತ್ ಕಂಬಗಳು ಧರೆಗೆ

-819 ಟ್ರಾನ್‌ರ್ಮ್‌ಗಳು, 31 ಸಣ್ಣ ನೀರಾವರಿ ಕೆರೆಗಳಿಗೆ ತೊಂದರೆ