ಶಿವಮೊಗ್ಗ: ನಗರದ ವಿವಿಧೆಡೆಯಲ್ಲಿ ಇರುವ ಖಾಲಿ ಜಾಗಗಳನ್ನು ಗುರುತಿಸಿ ಬೀದಿಬದಿ ವ್ಯಾಪಾರಿಗಳಿಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಪ್ರಮುಖರು ಬುಧವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ವಿನೋಬನಗರದ ಶಿವಾಲಯ ಪಕ್ಕದಲ್ಲಿರುವ ಮಾರುಕಟ್ಟೆಯಲ್ಲಿ 73 ಮಳಿಗೆಗಳನ್ನು ಈ ಹಿಂದೆ ಮಂಜೂರು ಮಾಡಿದ್ದರೂ ಅಲ್ಲಿ ವಹಿವಾಟು ನಡೆಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅವರಿಂದ ಆ ಮಳಿಗೆಗಳನ್ನು ಹಿಂಪಡೆದು ಅರ್ಹ ಪುಟ್‌ಪಾತ್ ವ್ಯಾಪಾರಿಗಳು ಮತ್ತು ತಿಂಡಿಗಾಡಿಗಳು, ಹಣ್ಣಿನ ಗಾಡಿ ವ್ಯಾಪಾರಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ಆಲ್ಕೊಳ ಸರ್ಕಲ್ ಬಳಿ ರಸ್ತೆ ಪಕ್ಕದಲ್ಲಿರುವ ತಿಂಡಿಗಾಡಿಗಳಿಗೆ ಆಲ್ಕೊಳ ಸರ್ಕಲ್ ಪಾರ್ಕ್ ಹತ್ತಿರದ ಸ್ಥಳಗಳಲ್ಲಿ ಅವಕಾಶ ಮಾಡಿಕೊಡಬೇಕು. ದುರ್ಗಿಗುಡಿ, ಕುವೆಂಪು ರಸ್ತೆ, ಸವಳಂಗ ರಸ್ತೆ, ಒಟಿ ರಸ್ತೆ ಸೇರಿ ಎಲ್ಲ ಕನ್ಸರ‌್ವೆನ್ಸಿಗಳಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯದಂತೆ ಕ್ರಮ ಕೈಗೊಂಡು ಸಂತೆಗೆ ಮೀಸಲಿಟ್ಟಿರುವ ಕೆಎಸ್‌ಆರ್‌ಟಿಸಿ ಡಿಪೋ ಎದುರಿನ ಮೈದಾನಕ್ಕೆ ಸ್ಥಳಾಂತರ ಮಾಡಬೇಕು. ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಹಾಗೂ ಸವಳಂಗ ರಸ್ತೆ ಮೇಲ್ಸೇತುವೆ ಕೆಳಗಡೆ ತಿಂಡಿ ಗಾಡಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಎಸ್.ಬಿ.ಅಶೋಕ್‌ಕುಮಾರ್, ರಾಜ್ಯ ಉಪಾಧ್ಯಕ್ಷ ಆರ್.ಮಣಿಗೌಂಡರ್ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.