ನ್ಯೂಸ್

ಸಿದ್ದಿ ಜನಾಂಗದವರಿಗೆ ರಕ್ಷಣೆ ಒದಗಿಸಲು ಮನವಿ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಒಂದು ವರ್ಷದಲ್ಲಿ ಸಿದ್ದಿ ಸಮುದಾಯದ ಇಬ್ಬರ ಕೊಲೆಯಾಗಿದೆ. ಸಮುದಾಯದ ಜನರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಬುಡಕಟ್ಟು ಸಿದ್ದಿ ಜನಪರ ಸಂಘದಿಂದ ಶನಿವಾರ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಹುಣಶೆಟ್ಟಿಕೊಪ್ಪ ಭಾಗದಲ್ಲಿ ಒಂದು ವರ್ಷದಿಂದೀಚೆಗೆ ಇಬ್ಬರು ಸಿದ್ದಿ ಸಮುದಾಯದವರ ಕೊಲೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದರಿಂದ ಸಮುದಾಯದ ಜನರು ಭಯಭೀತರಾಗಿದ್ದಾರೆ. ಕೊಲೆ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ವಿಧಿಸಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಿ, ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು. ಸೂಕ್ತ ಕಾನೂನು ತಿಳಿವಳಿಕೆ ನೀಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ರಾಜ್ಯಾಧ್ಯಕ್ಷ ಬೆನಿತ್ ಸಿದ್ದಿ, ಪ್ರಮುಖರಾದ ಜಾನ್ ಸಿದ್ದಿ, ಶೇಖರ ಸಿದ್ದಿ, ಶಂಕರ ಸಿದ್ದಿ, ರೇಣುಕಾ ಸಿದ್ದಿ, ಇತರರಿದ್ದರು.