ಬೆಂಗಳೂರು: ಮುಂಬರುವ ರಾಜ್ಯ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 5 ಕೋಟಿ ರೂ. ಅನುದಾನ ನಿಗದಿ ಜತೆಗೆ ಇ-ಶ್ರಮ್ ಯೋಜನೆಯಲ್ಲಿ ಲಾನುಭವಿಗಳ ವಯೋಮಿತಿಯನ್ನು 59 ವರ್ಷದಿಂದ 75 ವರ್ಷಕ್ಕೆ ಏರಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಿದೆ.
ಪತ್ರಿಕಾ ವಿತರಣೆಯಲ್ಲಿ 60 ವರ್ಷ ಮೇಲ್ಪಟ್ಟ ಅನೇಕ ವಿತರಕರು ಕೆಲಸ ಮಾಡುತ್ತಿದ್ದಾರೆ. ಹಾಲಿ ಇ - ಶ್ರಮ್ ಯೋಜನೆಯಲ್ಲಿ 59 ವರ್ಷಕ್ಕೆ ಸೀಮಿತವಾಗಿರುವ ವಯೋಮಿತಿಯನ್ನು 75 ವರ್ಷಕ್ಕೆ ಏರಿಸಿದಲ್ಲಿ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪತ್ರಿಕಾ ವಿತರಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಆಗ್ರಹಿಸಿದರು.
ವಿತರಕರಿಗಾಗಿ ಸಮುದಾಯ ಭವನ ನಿರ್ಮಿಸಲು ಜಾಗ, ವಿತರಕರ ನಿವೇಶನಗಳಿಗೆ ಜಮೀನು ಮಂಜೂರು ಹಾಗೂ ಎಲೆಕ್ಟ್ರಿಕ್ ಬೈಕ್‌ನ್ನು ಉಚಿತವಾಗಿ ನೀಡುವಂತೆಯೂ ಮನವಿ ಮಾಡಲಾಯಿತು.
ಮನವಿ ಪತ್ರ ಸ್ವೀಕರಿಸಿದ ಕೆ.ವಿ. ಪ್ರಭಾಕರ್ ಅವರು ಒಕ್ಕೂಟದ ಬೇಡಿಕೆಯನ್ನು ಸಿಎಂ ಅವರಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದರು.