ಶಿವಮೊಗ್ಗ: ಶಿಕಾರಿಪುರ ತೊಗರ್ಸಿಯ ಮಳೇಹಿರೇಮಠದ ಧಾರ್ಮಿಕ ಮಹತ್ವಕ್ಕೆ ಚ್ಯುತಿ ಬಾರದಂತೆ ತಾಲೂಕು ಆಡಳಿತ ಎಚ್ಚರಿಕೆ ವಹಿಸಬೇಕು. ಜಾತ್ರೆ ಸಂದರ್ಭದಲ್ಲಿ ಮಠದ ವತಿಯಿಂದ ನಡೆಯುತ್ತಿದ್ದ ದಾಸೋಹವನ್ನು ಸ್ಥಗಿತಗೊಳಿಸಿ ಧಾರ್ಮಿಕ ದತ್ತಿ ಇಲಾಖೆಯಿಂದಲೇ ದಾಸೋಹ ನಿರ್ವಹಣೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ಹಿಂದಿದ್ದ ವ್ಯವಸ್ಥೆಗೆ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ವೀರಶೈವ ಜಂಗಮ ಅರ್ಚಕ-ಪುರೋಹಿತ-ಜ್ಯೋತಿಷಿಗಳ ಪರಿಷತ್‌ನ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ವರ್ಷ ಫೆಬ್ರವರಿಯಲ್ಲಿ ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಳೇಹಿರೇಮಠದಲ್ಲೇ ದಾಸೋಹ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕಳೆದ ವಾರ ನಡೆದ ಜಾತ್ರೆ ಸಂರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದಲೇ ದಾಸೋಹದ ವ್ಯವಸ್ಥೆ ಮಾಡುವ ಮೂಲಕ ಮಠದ ಗೌರವಕ್ಕೆ ಕುಂದುಂಟು ಮಾಡಲಾಗಿದೆ ಎಂದು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ಸಂಘಟನೆಯಾಗಲಿ, ಮಠದ ಭಕ್ತರಾಗಲಿ ಮಠದಿಂದ ನಡೆಯುವ ದಾಸೋಹವನ್ನು ಮಾತ್ರ ಬೆಂಬಲಿಸುತ್ತೇವೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಯ್ಯ, ಪುಟ್ಟಯ್ಯ, ಜಗದೀಶ್ವರಯ್ಯ, ಲೋಕೇಶ್ವರಯ್ಯ, ಮಲ್ಲೇಶಪ್ಪ, ಸೋಮನಾಥ್ ಮುಂತಾದವರಿದ್ದರು.