ಬೆಂಗಳೂರು: ಬಂಜಾರ ಸಮುದಾಯದ ಸಮಗ್ರ ಮಾಹಿತಿಯನ್ನು ದಾಖಲಿಸುವ ‘ಬಂಜಾರ ಸಂಸ್ಕೃತಿ ವಿಶ್ವಕೋಶ’ ಸಿದ್ಧಪಡಿಸುವ ಸಂಬಂಧ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ರಾಜ್ಯ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ.
ಅಕಾಡೆಮಿಯ ಅಧ್ಯಿಕ್ಷ ಡಾ. ಎ.ಆರ್.ಗೋವಿಂದಸ್ವಾಮಿ ನೇತೃತ್ವದ ನಿಯೋಗವು ಕನ್ನಡ-ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿ ಮಾಡಿ ವಿಶ್ವಕೋಶ ಸಿದ್ಧಪಡಿಸುವ ಸಂಬಂಧ ಚರ್ಚೆ ನಡೆಸಿತು. ಆರಂಭಿಕ ಚಟುವಟಿಕೆಗಾಗಿ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಈ ಮನವಿಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಡಾ. ಗೋವಿಂದಸ್ವಾಮಿ ತಿಳಿಸಿದ್ದಾರೆ.
ನಿಯೋಗದಲ್ಲಿ ಸಂಶೋಧಕ ಡಾ. ಹಂ.ಪ.ನಾಗರಾಜಯ್ಯ, ಸಾಹಿತಿ ಡಾ. ಬಿ.ಟಿ.ಲಲಿತಾ ನಾಯಕ್, ಪರಿಸರ ತಜ್ಞ ಡಾ. ಡಿ.ಪರಮೇಶ್ ನಾಯಕ್, ಅಕಾಡೆಮಿ ರಿಜಿಸ್ಟ್ರಾರ್ ಡಿ.ಎಂ.ರವಿಕುಮಾರ್ ಇದ್ದರು.