ಶಿವಮೊಗ್ಗ: ಹೊಸನಗರ ತಾಲೂಕಿನಲ್ಲಿ ಶರಾವತಿ ನದಿಯನ್ನು ಮರಳು ದಂಧೆಕೋರರದಿಂದ ರಕ್ಷಿಸುವಂತೆ ಆಗ್ರಹಿಸಿ ಜನ ಸಂಗ್ರಾಮ ಪರಿಷತ್‌ನ ಗಿರೀಶ್ ಆಚಾರ್ ಪುಣಜೆ ಸೋಮವಾರ ಡಿಸಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶರಾವತಿ ನದಿ ಹಿನ್ನೀರಿನ ಪ್ರದೇಶದಲ್ಲಿ ಪ್ರತಿನಿತ್ಯ ನೂರಾರು ಲೋಡ್ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಹಿಟಾಚಿ ಬಳಸಿ ನದಿಯಿಂದ ಮರಳನ್ನು ತೆಗೆಯಲಾಗುತ್ತಿದೆ. ಮರಳನ್ನು ನದಿಯಂಚಿನ ಪ್ರದೇಶಗಳಾದ ಏರಗಿ, ಸುತ್ತಾ, ಬಾಳೆಕೊಪ್ಪ ಮತ್ತು ಮಳಲಿ ಗ್ರಾಮದ ಕಾಡಿನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ದೂರಿದರು.
ಖನಿಜ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ 2014ರ ಜ.21ರಂದು ಅಂದಿನ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ, ಗಣಿ, ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿತ್ತು. ಆದರೆ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆರೋಪಿಸಿದರು.
ಮರಳು ಸಾಗಣೆ ವಾಹನ ಸಂಚರಿಸಲು ನದಿಯಂಚಿನ ಕಾಡಿನಲ್ಲಿನ ಗಿಡ ಮರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಬೆಲೆ ಬಾಳುವ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಹೀಗಾಗಿ ಅಕ್ರಮ ಮರಳು ಗಣಿಗಾರಿಕೆ ಸ್ಥಗಿತಗೊಳಿಸಿ ಸಂಗ್ರಹಿಸಲಾದ ಮರಳನ್ನು ವಶಕ್ಕೆ ಪಡೆದು ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ವಿತರಿಸಬೇಕು. ಅಕ್ರಮವಾಗಿ ಮರಳು ಸಂಗ್ರಹಿಸಿದವರ ವಿರುದ್ಧ ಹಾಗೂ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.