ನ್ಯೂಸ್

ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಆದೇಶ ಪ್ರಶ್ನಿಸಿ ಮೇಲ್ಮನವಿ


ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಪಡಿಸಿದ ಹಾಗೂ ಹೊಸ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ ಹೊರಡಿಸಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ರಜಾ ದಿನವಾದ ಭಾನುವಾರದಂದು ವಿಭಾಗೀಯ ಪೀಠದಲ್ಲಿ ವಿಶೇಷ ಕಲಾಪ ನಡೆಯಿತು.

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿ, ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಏಕ ಸದಸ್ಯ ನ್ಯಾಯಪೀಠವು ೨೦೨೩ರ ಜ.೩೦ರಂದು ಪ್ರಕಟಿಸಿದ್ದ ಆದೇಶ ಪ್ರಶ್ನಿಸಿ ಜಿ.ವಿ. ನಾಗೇಂದ್ರ ಬಾಬು, ಭಾರತಿ ಪಾಟೀಲ್, ಗಣೇಶ್ ಪ್ರಸಾದ್ ಮತ್ತು ಮಮತಾ ಸೇರಿ ೧೩೦ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಭಾನುವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ವಿಶೇಷ ಕಲಾಪದಲ್ಲಿ ವಿಚಾರಣೆ ನಡೆಸಿತು.ಮೇಲ್ಮನವಿಯನ್ನು ಬೆಳಗ್ಗೆ ೧೧.೩೦ರ ಸುಮಾರಿಗೆ ವಿಚಾರಣೆ ಆರಂಭಿಸಿದ ನ್ಯಾಯಪೀಠ, ಎರಡೂವರೆ ಗಂಟೆಗೂ ಅಧಿಕ ಕಾಲ ಮೇಲ್ಮನವಿದಾರರ ಪರ ವಕೀಲರ ಸುಧೀರ್ಘ ವಾದ ಆಲಿಸಿದ ನಂತರ ವಿಚಾರಣೆಯನ್ನು ಸೆ.೮ ಕ್ಕೆ ಮುಂದೂಡಿತು.
ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು:
ಖಾಲಿಯಿದ್ದ ಸುಮಾರು ೧೫ ಸಾವಿರ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ(೬-೮ ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ೨೦೨೨ರ ಫೆ.೨೨ರಂದು ಅಧಿಸೂಚನೆ ಸಲ್ಲಿಸಿದ್ದರು. ಉಡುಪಿಯ ಯಡತಾಡಿ ಗ್ರಾಮದ ಅನಿತಾ ಸೇರಿ ೪೦ಕ್ಕೂ ಅಧಿಕ ಮಹಿಳಾ ಹುದ್ದೆ ಆಕಾಂಕ್ಷಿಗಳು ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ಲಿಖಿತ ಪರೀಕ್ಷೆಗೆ ಹಾಜರಾಗಿ ಉತ್ತಮ ರ‌್ಯಾಂಕ್ ಗಳಿಸಿದ್ದರು. ಅಲ್ಲದೆ, ೧:೨ ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅವರು ಅರ್ಹರಾಗಿದ್ದರು. ೨೦೨೨ರ ನ.೧೮ರಂದು ೧:೧ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ಇದರಿಂದ ಪಟ್ಟಿಯನ್ನು ಪ್ರಶ್ನಿಸಿ ಅನಿತಾ ಸೇರಿ ೪೦ ಮಂದಿ ಅಧಿಕ ಮಹಿಳಾ ಆಕಾಂಕ್ಷಿಗಳು ತಾತ್ಕಾಲಿಕ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ಪುರಸ್ಕರಿಸಿದ್ದ ಸಲ್ಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿತ್ತು. ಅರ್ಜಿದಾರ ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿತ್ತು. ಈ ಆದೇಶದಿಂದ ನೇಮಕಾತಿಯ ಪರಿಗಣನೆಗೆ ಒಳಪಡದ ಹಾಲಿ ಮೇಲ್ಮನವಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗಕ್ಕೆ ಪರಿಗಣಿಸುವಾಗ ಪತಿಯ ಆದಾಯ ಆಧಾರವಾಗಿತ್ತು. ಮಹಿಳೆ ಆದಾಯ ಪ್ರಮಾಣಪತ್ರಕ್ಕೆ ಪತಿಯ ಆದಾಯ ಪರಿಗಣಿಸಲಾಗುತ್ತಿತ್ತು. ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿ, ಅಭ್ಯರ್ಥಿ ತಂದೆಯ ಜಾತಿ-ಆದಾಯ ಪ್ರಮಾಣಪತ್ರ ಪರಿಗಣಿಸಿ ಹೊಸದಾಗಿ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಸೂಚಿಸಿರುವುದು ಸರಿಯಿಲ್ಲ. ಹಾಗಾಗಿ, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.