ಶಿವಮೊಗ್ಗ: ಸೇವೆ ಮಾಡುವ ಗುಣ ಮತ್ತು ಕಾಯಕ ನಿಷ್ಠೆಯನ್ನು ಮೈಗೂಡಿಸಿಕೊಂಡಿದ್ದ ಮಹಾನ್ ಶಿವಶರಣ ಹಡಪದ ಅಪ್ಪಣ್ಣ ಅವರು ಸುದ್ದಿಗಾಗಿ ಸೇವೆ ಮಾಡಲಿಲ್ಲ. ಸೇವೆ ಮಾಡಿ ಸಿದ್ಧಿಯಾಗಲಿಲ್ಲ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅಪ್ಪಣ್ಣ ಅವರು ಆದರ್ಶ ಪುರುಷನಂತೆ ಬದುಕಿದವರು. ಹಾಗಾಗಿಯೇ 12ನೇ ಶತಮಾನದಲ್ಲಿ ಬಂದು ಹೋದ ಶ್ರೇಷ್ಠರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದಾರೆ ಎಂದರು.
ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದು ವಚನಗಳಿದ್ದರೆ ಹಡಪದ ಅಪ್ಪಣ್ಣ ಅವರ ವಚನಗಳಂತೆ ಇರಬೇಕೆಂಬ ಮಾತಿದೆ. ಅವರ ವಚನಗಳಲ್ಲಿ ಬಸವಣ್ಣನ ಶೈಲಿ ಎದ್ದು ಕಾಣುತ್ತದೆ. ವಚನ ಎಂದರೆ ಮಾತು, ಮಾತು ಯಾವಾಗಲೂ ಅರ್ಥಗರ್ಭಿತವಾಗಿರಬೇಕು. ಇನ್ನೊಬ್ಬರನ್ನು ನಿಂಧನೆ ಮಾಡುವುದು ಸಲ್ಲದು. ಹಿಂದೊಂದು-ಮುಂದೊಂದು ಮಾತುಗಳನ್ನಾಡದೇ ನೇರ ನುಡಿ ಹೊಂದಿರಬೇಕು. ಸಂದೇಹಕ್ಕೆ ಅವಕಾಶಗಳೇ ಇರಬಾರದು. ದ್ವಂಧ್ವ ಬುದ್ಧಿ ಬೇಡ ಎನ್ನುವುದು ಅಪ್ಪಣ್ಣ ಅವರ ಕಲ್ಪನೆಯಾಗಿತ್ತು ಎಂದರು.
ಬಸವಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಬಾಗಲಕೋಟೆ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಜನಿಸಿದವರು. ಅವರಿಬ್ಬರ ವಿಚಾರಧಾರೆ ಒಂದೇ ಆಗಿತ್ತು. ಬಸವಣ್ಣ ಮತ್ತು ಅಪ್ಪಣ್ಣ ಅವರ ಸಂಬಂಧ ಬಹಳ ಬಾಂಧವ್ಯದಿಂದ ಕೂಡಿತ್ತು. ಜನರು ಅಪ್ಪಣ್ಣ ಅವರನ್ನು ನಿಂದಿಸುತ್ತಿದ್ದ ಸಂದರ್ಭದಲ್ಲಿ ಅವರಿಂದಲೇ ನಾನು ಶ್ರೇಷ್ಠ ವ್ಯಕ್ತಿಯಾಗಿದ್ದು ಎಂದು ಬಸವಣ್ಣ ಎಲ್ಲರೆದುರು ಹೇಳುತ್ತಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಅರ್ಥಮಂತ್ರಿಯಾದ ಬಳಿಕ ಬಸವಣ್ಣ ಅವರು ಅಪ್ಪಣ್ಣ ಅವರನ್ನು ತಮ್ಮ ಜತೆಯಲ್ಲೇ ಇಟ್ಟುಕೊಂಡಿದ್ದರು. ಹಾಗಾಗಿ ಅಪ್ಪಣ್ಣ ಬಸವಣ್ಣನ ಒಡನಾಡಿಯಾಗಿದ್ದರು ಎಂದು ಹೇಳಿದರು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಹನುಮಂತಪ್ಪ, ಹಡಪದ ಅಪ್ಪಣ್ಣ ಸಮಾಜದ ಗೌರವಾಧ್ಯಕ್ಷ ಮಲ್ಲೇಶಪ್ಪ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ತಾಲೂಕು ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಎಸ್.ವೀರಭದ್ರಯ್ಯ, ಬಿ.ಸಿ.ಕುಮಾರ್ ಉಪಸ್ಥಿತರಿದ್ದರು.