ನ್ಯೂಸ್

ಬಡ್ಡಿ ಮೇಲೆ ಬಡ್ಡಿ ಬಂತು, ಆಮ್ಯಾಲೆ ಅಸಲು ಬಡ್ಡಿ ಎರಡೂ ಹೋಯ್ತು

ಚಿಕ್ಕಬಳ್ಳಾಪುರ: ಹೆಚ್ಚಿನ ಬಡ್ಡಿ ನೀಡುವ ಆಸೆಯನ್ನು ಹುಟ್ಟಿಸಿ ಪಂಗನಾಮ ಹಾಕುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಹಲವರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲೊಬ್ಬರು ಬಡ್ಡಿ ಆಸೆಗೆ ನಾಲ್ಕೂ ವರೆ ಲಕ್ಷ ರೂ ಕಳೆದುಕೊಂಡಿದ್ದಾರೆ.

ಶಿಡ್ಲಘಟ್ಟ ನಗರದ ರೇಷ್ಮೆ ವ್ಯಾಪಾರಿ ನಾಸೀರ್ ಪಾಷಾ ಮೋಸ ಹೋದವರು. ದುರುಳರು THE SHOPPERS  APP  RAZORPAY  ವ್ಯಾಲೆಟ್ ಗೆ ಹಣವನ್ನು ಹೂಡಿಕೆ ಮಾಡಿಕೊಂಡು ಕೊನೆಗೆ ವಂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಗೆಳೆಯರು THE SHOPPERS  APP  ಬಗ್ಗೆ ತಿಳಿಸಿ, ಹೂಡಿಕೆಯ ಹಣಕ್ಕೆ ಒಳ್ಳೆಯ ಬಡ್ಡಿ ಸಿಗುತ್ತೆ ಎಂದಾಗ ನಾಸೀರ್ ಪಾಷಾ ಮೊದಲು 10 ಸಾವಿರ ರೂ ಜಮಾ ಮಾಡಿದ್ದಾರೆ. ಇದಕ್ಕೆ 8 ದಿನಕ್ಕೆ 4 ಸಾವಿರ ಬಡ್ಡಿಯೊಂದಿಗೆ 14 ಸಾವಿರ ರೂ ಸಿಕ್ಕಿದೆ. ಆ್ಯಪ್ ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಅಪರಿಚಿತರು ಪ್ರೋತ್ಸಾಹದಾಯಕ ಸಂಭಾಷಣೆಯ ಮೂಲಕ ಮತ್ತಷ್ಟು ಪುಸಲಾಯಿಸಿದ್ದಾರೆ. ಇದರಿಂದ ಖುಷಿಯಾಗಿ ನಾಸೀರ್ 50 ಸಾವಿರ ರೂ, ಬಳಿಕ 1 ಲಕ್ಷ ರೂ, ಮತ್ತೆ 1 ಲಕ್ಷ ರೂ ಸೇರಿ ಹೀಗೆ 4,59,350 ರೂ ಹಣ ಜಮಾ ಮಾಡಿದ್ದಾರೆ. ಆದರೆ, ದೊಡ್ಡ ಮೊತ್ತ ಜಮಾ ಆಗುತ್ತಿದ್ದಂತೆ ಬಡ್ಡಿ ಬರುವುದು ನಿಂತು ಹೋಗಿದೆ. ಆ್ಯಪ್ ಬ್ಲಾಕ್ ಆಗಿದೆ. ಇದರಲ್ಲಿನ ಮೊಬೈಲ್ ಸಂಖ್ಯೆಯ ಕರೆ ಮಾಡಿದಾಗ ಪ್ರತಿಕ್ರಿಯೆ ಸಿಕ್ಕಿಲ್ಲ. ಇದರಿಂದ ವಂಚನೆಗೊಳಗಾಗಿರುವುದು ಗೊತ್ತಾಗಿದೆ.