ರಾಮನಗರ : ರೈತರಲ್ಲದವರನ್ನು ನಾಮಿನಿ ಸದಸ್ಯರನ್ನಾಗಿ ನೇಮಿಸಿ ಮತದಾನದ ಹಕ್ಕು ನೀಡುವ ಮೂಲಕ ಬಿಜೆಪಿ ಮುಖಂಡರು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ ಎಂದು ಎಪಿಎಂಸಿ ವಾಜಿ ಅಧ್ಯಕ್ಷ ದೊರೆಸ್ವಾಮಿ ಆರೋಪಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದ 6 ಹಾಗೂ ಕಾಂಗ್ರೆಸ್ ಪಕ್ಷದ 4 ಸದಸ್ಯರಿರುವ ಎಪಿಎಂಸಿಗೆ ಬಿಜೆಪಿ ಸರ್ಕಾರ ಈ ಹಿಂದೆ ನಿಯೋಜಿಸಿದ್ದ ನಾಮಿನಿ ಸದಸ್ಯರನ್ನು ಬದಲಾಯಿಸಿ, ವಾಗಡಿ ಕ್ಷೇತ್ರ ಒಂದರಿಂದಲೇ ಮೂವರನ್ನು ನಾಮನಿರ್ದೇಶನ ಮಾಡಲಾಗಿದೆ. ಇವರಾರೂ ರೈತರಲ್ಲ. ಇವರ ಹೆಸರಿನಲ್ಲಿ ಯಾವುದೇ ಪಹಣಿ ಸಹ ಇಲ್ಲ.
ನಾಮಿನಿ ಸದಸ್ಯೆಯಾಗಿರುವ ಜಡೇನಹಳ್ಳಿಯ ಮಮತಾ ಎಂಬುವವರನ್ನು ಕಾನೂನು ಪ್ರಕಾರ ರಾಮನಗರ ಎಪಿಎಂಸಿ ವ್ಯಾಪ್ತಿಯ ಕೃಷಿಕರೆಂದು ಪರಿಗಣಿಸಲು ಅವಕಾಶವಿಲ್ಲ ಎಂದು ಕೃಷಿ ಇಲಾಖೆ ವಾರಾಟ ನಿರ್ದೇಶಕ ಕರೀಗೌಡ ಅಧಿಸೂಚನೆ ಹೊರಡಿಸಿದ್ದರು, ಇವರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಿರುವುದು ನ್ಯಾಯಯುತವಾಗಿಲ್ಲ. ಈ ಬಗ್ಗೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ದೂರು ನೀಡಲಾಗಿದೆ ಎಂದರು.
ವಾಗಡಿಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿ ಪುರಸಭೆ ಅಧ್ಯಕ್ಷ ಸ್ಥಾನ ನೀಡಿದ್ದು, ಎಪಿಎಂಸಿಯಲ್ಲಿ ಜೆಡಿಎಸ್‌ಗೆ ಬಿಜೆಪಿ ಬೆಂಬಲ ನೀಡುವಂತೆ ಶಾಸಕ ಎ.ಮಂಜುನಾಥ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಮನವಿ ವಾಡಿದ್ದರು. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ವಾಗಡಿ ಮಂಡಲ ಬಿಜೆಪಿ ಅಧ್ಯಕ್ಷ ಧನಂಜಯ್ಯ ಪಕ್ಷದ ವರಿಷ್ಠರ ಮಾತನ್ನು ಕಡೆಗಣಿಸಿ ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ 58 ಸ್ಥಾನ ಗಳಿಸಿದ್ದನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮರೆಯಬಾರದು. ಜೆಡಿಎಸ್ ನಿಜವಾದ ಬಿ ಟೀಮ್ ಅಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್ ಬಿಜೆಪಿಗೆ, ಬಿಜೆಪಿಗೆ ಕಾಂಗ್ರೆಸ್ ಬಿ ಟೀಮ್ ಆಗಿದೆ ಎಂಬುದನ್ನು ರಾಮನಗರದ ಎಪಿಎಂಸಿ ಅಧ್ಯಕ್ಷ ಚುನಾವಣೆ ಸಮಯದಲ್ಲಿ ನಿಜವಾಗಿಸಿದ್ದಾರೆ ಎಂದು ದೊರೆಸ್ವಾಮಿ ಅಸವಾಧಾನ ವ್ಯಕ್ತಪಡಿಸಿದರು.