ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಪನಂಬಿಕೆ, ಅಪಸ್ವರ, ಗೊಂದಲಗಳ ದೂಳಿನಿಂದ ದೋಸ್ತಿ ಪಡೆ ಮೈಕೊಡವಿಕೊಂಡು ಮೇಲೆದ್ದಿದೆ. ಮುಡಾ ಅಕ್ರಮದ ವಿರುದ್ಧ ಸರ್ಕಾರಕ್ಕೆ ಸೆಡ್ಡು ಹೊಡೆದು, ಚಲೋ ಮೈಸೂರು ಪಾದಯಾತ್ರೆಗೆ ಸನ್ನದ್ಧವಾಗಿದೆ.
ಪೂರ್ವ ನಿರ್ಧಾರದಂತೆ ಆ.3ರಿಂದ 10ರವರೆಗೆ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಯಲಿದೆ. ಬಿಜೆಪಿ-ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ಕಹಳೆ ಮೊಳಗಿಸಲಿವೆ. ಬಿಜೆಪಿ ರಾಜ್ಯ ಪದಾಧಿಕಾರಿಗಳು ಗುರುವಾರ ಆಂತರಿಕ ಸಭೆ ನಡೆಸಿದರು. ಮತ್ತೊಂದು ತಂಡ ಪಾದಯಾತ್ರೆ ಮಾರ್ಗಪಥದ ಸಮೀಕ್ಷೆ, ವಸತಿ, ಉಟೋಪಚಾರ ಸ್ಥಳ ಜತೆಗೆ ಬಹಿರಂಗ ಸಭೆಗಳಿಗೆ ಅಗತ್ಯ ಮೈದಾನ ಗುರುತಿಸಿ ಅಂತಿಮಗೊಳಿಸಿದೆ.
ಕೆಂಗೇರಿ ಬಳಿ ವೇದಿಕೆ ನಿರ್ಮಾಣ: ಕೆಂಗೇರಿಯ ಕೆಂಪಮ್ಮ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ 9ಕ್ಕೆ ಪೂಜೆ ಸಲ್ಲಿಸಿ, ಏಳು ದಿನಗಳ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ ಸಭಾಮಂಟಪ ಹಾಗೂ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ. ಚಾಲನಾ ಕಾರ್ಯಕ್ರಮಕ್ಕೆ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪಾದಯಾತ್ರೆ ನಿರ್ವಹಣೆಗೆ ವಿವಿಧ ಮೋರ್ಚಾಗಳ ಜತೆಗೆ ತಂಡಗಳು ರಚನೆಯಾಗಿವೆ. ಮೊದಲ ದಿನದ ಪಾದಯಾತ್ರೆಯನ್ನು ಯುವ ಮೋರ್ಚಾ ನಿರ್ವಹಿಸಲಿದೆ.
ಐದು ಬಹಿರಂಗ ಸಭೆಗಳು: ಕೆಂಗೇರಿಯ ಉದ್ಘಾಟನೆ, ಮೈಸೂರಿನ ಸಮಾರೋಪ ಕಾರ್ಯಕ್ರಮ ಹೊರತುಪಡಿಸಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆಗಳು ನಡೆಯಲಿವೆ. ಬೆಳಗ್ಗೆ 10 ಕಿ.ಮೀ. ಮಧ್ಯಾಹ್ನ ಊಟದ ನಂತರ 10 ಕೀ.ಮೀನಂತೆ ಪ್ರತಿದಿನ 20 ಕಿ.ಮೀ. ಕ್ರಮಿಸಲು ಯೋಜಿಸಲಾಗಿದೆ. ವಿಧಾನಸಭೆ ಕ್ಷೇತ್ರವಾರು 200 ಜನರು ಸೇರಿ ಪ್ರತಿದಿನ ಐದಾರು ಸಾವಿರ ಜನರು ಭಾಗಹಿಸಲಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಪದಾಧಿಕಾರಿಗಳು ಏಳು ದಿನವೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನವದೆಹಲಿ: ವಾಲ್ಮೀಕಿ ಮತ್ತು ಮುಡಾ ಹಗರಣದ ವಿರುದ್ಧ ನಿಗದಿಯಾಗಿರುವ ಪಾದಯಾತ್ರೆಯನ್ನು ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಲಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕುಮಾರಸ್ವಾಮಿ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಬಿಜೆಪಿ, ಜೆಡಿಎಸ್ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ವಿರುದ್ಧ ಜನಾಂದೋಲನ ನಡೆಸುವುದು ನಮ್ಮ ಉದ್ದೇಶ. ಒಗ್ಗಟ್ಟಿನಿಂದ ಹೋರಾಟ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಸಂಸತ್ತಿನಲ್ಲೂ ಹೋರಾಟ ಮಾಡಿದ್ದೇವೆ. ಅದರ ಮುಂದುವರಿದ ಭಾಗವಾಗಿ, ಆ.3ರ(ಶನಿವಾರ) ಬೆಳಗ್ಗೆ ನೈಸ್ ರೋಡ್ ಜಂಕ್ಷನ್ನಿಂದ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಸಿ ನಡೆಸುತ್ತಿರುವ ಹೋರಾಟ ಎಂದಿರುವ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮದು ದೊಡ್ಡ ಪರಿವಾರ. ಸಣ್ಣ-ಪುಟ್ಟ ಮಾತುಗಳಿಗೆ ಮಾನ್ಯತೆ ಕೊಡಬಾರದು ಎಂದರು.
ಮನವೊಲಿಸಿದ ಜೋಶಿ, ವಿಜಯೇಂದ್ರ: ಪಾದಯಾತ್ರೆಗೆ ಆಕ್ಷೇಪ ತೆಗೆದಿದ್ದ ಕುಮಾರಸ್ವಾಮಿ ಮನವೊಲಿಸುವಲ್ಲಿ ಪ್ರಲ್ಹಾದ ಜೋಶಿ ಮತ್ತು ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ಜೋಶಿ ಕಚೇರಿಯಲ್ಲಿ ವಿಜಯೇಂದ್ರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ, ಕುಮಾರಸ್ವಾಮಿ ಅವರನ್ನು ಪಾದಯಾತ್ರೆಗೆ ಬರುವಂತೆ ಒಪ್ಪಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಪಾದಯಾತ್ರೆ ಸಂಬಂಧ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಮತ್ತು ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಹೋರಾಟ ಮಾಡುವುದು ತಮ್ಮ ರಾಜಕೀಯ ಅಸ್ತಿತ್ವಕ್ಕೆ ಹಾನಿ ಉಂಟು ಮಾಡಲಿದೆ ಎನ್ನುವುದು ಜೆಡಿಎಸ್ ನಾಯಕರ ಚಿಂತೆಗೆ ಕಾರಣವಾಗಿತ್ತು. ಇದೀಗ ಕುಮಾರಸ್ವಾಮಿ ಅವರಿಂದಲೇ ಪಾದಯಾತ್ರೆ ಉದ್ಘಾಟಿಸಲು ಬಿಜೆಪಿ ತೀರ್ವನಿಸಿದೆ.
ಮನಸೋ ಇಚ್ಛೆ ಹೇಳಿಕೆ ನೀಡಬೇಡಿ: ಮುಡಾ ಪ್ರಕರಣ ಸಂಬಂಧ ಸಿಎಂಗೆ ರಾಜ್ಯಪಾಲರು ಶೋಕಾಸ್ ನೋಟೀಸ್ ನೀಡಿರುವ ವಿಷಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ತಾಕೀತು ಮಾಡಿದೆ. ರಾಜಕೀಯ ಸಂಕ್ರಮಣ ಕಾಲಘಟ್ಟದಲ್ಲಿ ಪ್ರತಿ ಹೇಳಿಕೆಗೂ ಮಹತ್ವ ಬರುತ್ತದೆ. ಆದ್ದರಿಂದ ವರಿಷ್ಠರ ಸೂಚನೆಗಳನ್ನು ದಾಟಿ ಮಾಧ್ಯಮದ ಮುಂದೆ ಹೇಳಿಕೆ ನೀಡಬಾರದು. ಜವಾಬ್ದಾರಿ ಹೊತ್ತಿರುವ ಬಿಜೆಪಿ ಪ್ರಮುಖ ನಾಯಕರನ್ನು ಹೊರತುಪಡಿಸಿ ಇನ್ನುಳಿದವರು ಮಾಧ್ಯಮದ ಎದುರು ಹೋಗಬಾರದು ಎಂದು ತಿಳಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಎಚ್.ಡಿ. ಕುಮಾರಸ್ವಾಮಿ ಜತೆಗೆ ಸಂವಹನ ಕೊರತೆ ಉಂಟಾಗಿತ್ತಷ್ಟೇ. ಅದು ಬಗೆಹರಿದಿದೆ. ನಾವು ಅವರೊಂದಿಗೆ ಮಾತನಾಡಿ, ಗೊಂದಲ ಪರಿಹರಿಸಿದ್ದೇವೆ. | ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿರುವುದು ಸಿಎಂ ಒಪ್ಪಿಕೊಂಡಿದ್ದಾರೆ. ಮುಡಾದಲ್ಲಿ ಸಿಎಂ ಕುಟುಂಬಕ್ಕೆ 14 ಸೈಟ್ ಬಂದಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರವನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಅವರೇ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. | ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ರಾಜ್ಯ ಸಚಿವ ಸಂಪುಟಸಭೆಯಲ್ಲಿ ರಾಜ್ಯಪಾಲರನ್ನು ಹೆದರಿಸುವ ಕೆಲಸ ಮಾಡಲಾಗಿದೆ. ರಾಜ್ಯಪಾಲರು ಕಾಂಗ್ರೆಸ್ನ ಗೊಡ್ಡು ಬೆದರಿಕೆಗಳಿಗೆ ಹೆದರುವ ಅಗತ್ಯವಿಲ್ಲ. | ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ