ವಿಶಾಖಪಟ್ಟಣಂ: ಪೊಲೀಸ್ ಕಿರುಕುಳ ಎಂದು ಆರೋಪಿಸಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರುವ ಸಂತ್ರಸ್ತರ ಸಂಬಂಧಿಕರ ಮನೆಗೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಅಮ್ಝಾನ್ ಬಾಷಾ ಮತ್ತು ಸಂಸದ ಪೊಚಾ ಬ್ರಹ್ಮಾನಂದ ರೆಡ್ಡಿ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಕರ್ನೂಲ್ ಜಿಲ್ಲೆಯ ನಂದ್ಯಾಲ್ ಪಟ್ಟಣದ ಬಳಿ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿತ್ತು. ಇದೇ ಪ್ರಕರಣದಲ್ಲಿ ಭಾನುವಾರ ವೃತ್ತ ನಿರೀಕ್ಷಕ ಸೋಮಶೇಖರ್ ರೆಡ್ಡಿ ಮತ್ತು ಹೆಡ್ ಕಾನ್ಸ್ಟೇಬಲ್ ಗಂಗಾಧರ್ ಎಂಬುವರನ್ನು ಬಂಧಿಸಲಾಗಿದೆ. ಮೃತ ಕುಟುಂಬಸ್ಥರಾದ ಶೇಖ್ ಅಬ್ದುಲ್ ಸಲಾಂ (45), ಪತ್ನಿ ನೂರ್ಜಹಾನ್ (43), ಮಗ ದಾದಾ ಖಲಂದರ್ (9) ಮತ್ತು ಮಗಳು ಸಲ್ಮಾ (14)ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇಲೆ ಪೇದೆಗಳನ್ನು ಬಂಧಿಸಲಾಗಿದೆ. ಇಡೀ ಕುಟುಂಬವು ಕಳೆದ ಬುಧವಾರ ಆತ್ಮಹತ್ಯೆಗೆ ಶರಣಾಗಿತ್ತು.
ಆತುರದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಬ್ದುಲ್ ಸಲಾಂ ಸ್ವತಃ ವಿಡಿಯೋ ರೆಕಾರ್ಡ್ ಮಾಡಿ ಪೊಲೀಸ್ ದೌರ್ಜನ್ಯ ಬಗ್ಗೆ ವಿವರಿಸಿದ್ದರು. ಪೊಲೀಸರು ನೀಡುತ್ತಿರುವ ಕಿರುಕುಳವನ್ನು ತಡೆಯಲಾಗದು ಎಂದು ಅಳಲು ತೋಡಿಕೊಂಡಿದ್ದರು. ಬಳಿಕ ಮೊಬೈಲ್ ಫೋನ್ ಅನ್ನು ಅವರ ಮನೆಯಲ್ಲಿಯೇ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಮೊಬೈಲ್ ಫೋನ್ ಮೃತರ ಸಂಬಂಧಿಕರ ಕೈಗೆ ಸಿಕ್ಕಿತ್ತು. ಇದರ ಜತೆಗೆ ವಿಡಿಯೋ ಜಾಲತಾಣದಲ್ಲೂ ವೈರಲ್ ಆಗಿತ್ತು.
ನಾಂದ್ಯಾಲ್ ಪಟ್ಟಣ ಪೊಲೀಸರು ಸುಳ್ಳು ಪ್ರಕರಣವೊಂದರಲ್ಲಿ ನಮನ್ನು ಸಿಲುಕಿಸಿದ್ದಾರೆ. ನಮಗೆ ಯಾರೊಬ್ಬರ ನೆರವು ಸಹ ಸಿಗುತ್ತಿಲ್ಲ. ಹೀಗಾಗಿ ನಾವು ನಮ್ಮ ಜೀವನಕ್ಕೆ ಅಂತ್ಯವಾಡುತ್ತಿದ್ದೇವೆ ಎಂದು ಕುಟುಂಬ ನೋವು ತೋಡಿಕೊಂಡಿತ್ತು.
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಶಂಖ ಬ್ರಟಾ ಬಾಗ್ಚಿ ಮತ್ತು ಗುಂಟೂರು ಎಎಸ್ಪಿ ಆರೀಫ್ ಹಫೀಜ್ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ವೃತ್ತ ನಿರೀಕ್ಷಕ ಸೋಮಶೇಖರ್ ರೆಡ್ಡಿ ಮತ್ತು ಹೆಡ್ ಕಾನ್ಸ್ಟೇಬಲ್ ಗಂಗಾಧರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಾಗೂ ಬೇಕೆಂತಲೇ ಕಿರುಕುಳ ನೀಡಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನೇಕ ಮುಸ್ಲಿಂ ಸಂಘಟನೆಗಳು ಸಹ ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್)