ನ್ಯೂಸ್

ಸ್ಟಾರ್​ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ!

ಮುಂಬೈ: ಸಿನಿ ತಾರೆಯರು ನಿಂತರೆ ಕುಂತರೆ ಕೈಗೊಂದು, ಕಾಲಿಗೊಂದು ಆಳು. ಎಷ್ಟೋ ಮಂದಿ ಸ್ಟಾರ್​ ನಟರ ಬಾಡಿಗಾರ್ಡ್​ಗಳಿಗೆ ಸಂಬಳವೇ ಹತ್ತಿಪ್ಪತ್ತು ಲಕ್ಷವೂ ಇದೆ. ಹೀಗಿದ್ದ ಮೇಲೆ ಅಡುಗೆಯವರು ಕೇಳಬೇಕೆ? ಈ ಕುರಿತಾಗಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಇದೀಗ ಶಾಕಿಂಗ್​ ವಿಷಯವೊಂದನ್ನು ರಿವೀಲ್​ ಮಾಡಿದ್ದಾರೆ

ಸಂದರ್ಶನವೊಂದರಲ್ಲಿ ಸ್ಟಾರ್ ನಟ-ನಟಿಯರ ದುಬಾರಿ ಜೀವನ ಶೈಲಿಯ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ. ಸ್ಟಾರ್​ ನಟನೊಬ್ಬ ತಮ್ಮ ಅಡುಗೆಯವನಿಗೆ ದಿನಕ್ಕೆ ಎರಡು ಲಕ್ಷ ರೂಪಾಯಿ ಸಂಬಳ ಕೊಡುತ್ತಾನೆ. ಆ ನಟನ ಹೆಸರನ್ನು ರಿವೀಲ್​ ಮಾಡದ ಅನುರಾಗ್​ ಕಶ್ಯಪ್​ ಅವರು, ಪ್ರತಿದಿನದ ಲೆಕ್ಕದಲ್ಲಿ ಶೆಫ್​ಗೆ ಎರಡು ಲಕ್ಷ ರೂಪಾಯಿ ನೀಡಲಾಗುತ್ತದೆ. ಹಾಗೆ ಲೆಕ್ಕ ಹಾಕಿದರೆ ತಿಂಗಳಿಗೆ ಸುಮಾರು 60 ಲಕ್ಷ ರೂಪಾಯಿ. ಇದನ್ನು ನಾನು ಖುದ್ದಾಗಿ ನೋಡಿದ್ದೇನೆ. ಆ ಶೆಫ್​ ನಟನಿಗೆ ಏನೇನು ಬೇಕೋ ಅದನ್ನು ಮಾಡಿಕೊಡುತ್ತಾನೆ. ಆ ನಟನಿಗೆ ಕೆಲವೊಂದು ಆಹಾರಗಳ ಅಲರ್ಜಿ ಇರುವ ಕಾರಣ, ಆರೋಗ್ಯಕರ ಅಡುಗೆಯನ್ನಷ್ಟೇ ಮಾಡಿಕೊಡುವುದು ಆತನ ಕೆಲಸ. ಅದಕ್ಕಾಗಿ ಇಷ್ಟು ದೊಡ್ಡದ ಹಣ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇಷ್ಟೆಲ್ಲಾ ಸಂಬಳ ಪಡೆಯುವ ಆ ಶೆಫ್​ ಭಾರಿ ಆಹಾರವನ್ನೇನೂ ಮಾಡುವುದಿಲ್ಲ. ತರಕಾರಿ, ಬೀಜಗಳನ್ನು ಬೆರೆಸಿದ ವಿಚಿತ್ರವಾದ ಸ್ವಲ್ಪವೇ ಆಹಾರ ತಯಾರಿಸುತ್ತಾನೆ. ಅದನ್ನು ಮಾತ್ರ ಆ ಸ್ಟಾರ್ ತಿನ್ನುತ್ತಾನೆ. ನಾನು ಆ ಅಡುಗೆಯನ್ನು ಒಮ್ಮೆ ನೋಡಿ ಏನಿದು? ಮನುಷ್ಯರು ತಿನ್ನುವುದಾ ಇಲ್ಲ ಹಕ್ಕಿಗಳಿಗೆ ತಿನ್ನಿಸುವುದಾ ಎಂದು ಕೇಳಬೇಕು ಎನ್ನಿಸಿತ್ತು. ಇದನ್ನು ಮಾಡಲು ಈ ಪರಿ ಖರ್ಚು ಮಾಡಲಾಗುತ್ತದೆ. ವಿನಾ ಕಾರಣ, ಹಣದ ದುರುಪಯೋಗ ಆಗುತ್ತಿದೆ ಎಂದಿದ್ದಾರೆ.

ನಟ-ನಟಿಯರು ಮಾಡುವ ಡಿಮ್ಯಾಂಡ್​ಗಳನ್ನು ಪೂರೈಸುವುದರಲ್ಲೇ ಸಿನಿಮಾದ ಕಾಲು ಭಾಗ ಬಜೆಟ್ ಹೊರಟು ಹೋಗುತ್ತದೆ. ಉದಾಹರಣೆಗೆ ನಟಿಗೆ ಬೇಕಾದ ಬರ್ಗರ್ ತೆಗೆದುಕೊಂಡು ಬರಲು ಗಾಡಿಯೊಂದು ಮೂರು ಕಿ.ಮೀ ಜರ್ನಿ ಮಾಡಿಕೊಂಡು ನಗರಕ್ಕೆ ಹೋಗಿ ಬರಬೇಕು, ಇಂಥಹುಗಳಲ್ಲಿಯೇ ಬಜೆಟ್ ಹೊರಟುಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.