ನ್ಯೂಸ್

ರಾಮಕೃಷ್ಣ ಗುರುಕುಲದಲ್ಲಿ ಮಕ್ಕಳಿಂದಲೇ ಜನ್ಮದಾತರಿಗೆ ಪಾದಪೂಜೆ

ಶಿವಮೊಗ್ಗ: ಹಳ್ಳಿಯಿಂದ ದಿಲ್ಲಿವರೆಗೂ ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಹೆಚ್ಚಿರುವುದು ಸಾಮಾನ್ಯ. ಅಲ್ಲಿನ ಆಚರಣೆ, ವಿಧಿ ವಿಧಾನಗಳು ವಿದ್ಯಾರ್ಥಿಗಳಿಗೆ ಹೊರೆ ಆಗುತ್ತಿವೆ. ಇದರಿಂದ ಬಹುತೇಕರು ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನೇ ಮರೆಯುತ್ತಿದ್ದಾರೆ ಎಂಬುದು ಸುಳ್ಳಲ್ಲ. ಇಂತಹ ಸಂದರ್ಭದಲ್ಲೂ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಆಂಗ್ಲಮಾಧ್ಯಮ ಗುರುಕುಲ ವಸತಿ ವಿದ್ಯಾಲಯವು ಮಕ್ಕಳಿಂದಲೇ ಜನ್ಮದಾತರಿಗೆ ಪಾದಪೂಜೆ ಮಾಡಿಸುವ ಮೂಲಕ ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು.

ಮೂರು ದಶಕದ ಹಿರಿಮೆ ಹೊಂದಿರುವ ವಿದ್ಯಾಲಯದಲ್ಲಿ ವರ್ಷದ ಪ್ರಾರಂಭೋತ್ಸವವನ್ನು ಭಾನುವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು ಜನ್ಮದಾತರಿಗೆ ಪಾದಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗೋತ್ಸವದ ಮೂಲಕ ಆಚರಿಸಿದ್ದು ವೀಶೇಷವಾಗಿತ್ತು. ಶುಭ್ರವಾದ ಬಿಳಿ ಉಡುಪುಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸರದಿಯಲ್ಲಿ ಕುಳಿತಿದ್ದ ತಮ್ಮ ಜನ್ಮದಾತರ ಪಾದಗಳಿಗೆ ಏಕಕಾಲಕ್ಕೆ ಪೂಜಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 600ಕ್ಕೂ ಅಧಿಕ ಪಾಲಕ ದಂಪತಿಗಳು ಪಾದಪೂಜೆಯಲ್ಲಿ ಪಾಲ್ಗೊಂಡಿದ್ದರು.

ಅರ್ಚಕರು ಪಾದಪೂಜೆಯ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಸಾಮೂಹಿಕ ಮಂಗಳಾರತಿ ನೆರವೇರಿಸಿತು. ಪಂಚಪಾತ್ರೆ, ಹಣ್ಣು, ತೆಂಗಿನಕಾಯಿ, ಹೂವು, ಮಂತ್ರಾಕ್ಷತೆ ಸೇರಿ ಪೂಜಾ ಸಾಮಗ್ರಿಯನ್ನು ವಿದ್ಯಾಲಯದಿಂದಲೇ ಒದಗಿಸಲಾಗಿತ್ತು. ಮನೆ ದೇವರ ಸ್ಮರಣೆ ಮೂಲಕ ಪಾದಪೂಜೆ ಆರಂಭಿಸಿದ ಮಕ್ಕಳು ಗೋವಿಂದಾಯನಮಃ ಸ್ತ್ರೋತ್ರ ಪಠಿಸಿದರು.