ಅಶೋಕ್ ಸಿಂಘಾಲ್ ಪಾತ್ರದಲ್ಲಿ ಅನುಪಮ್ ಖೇರ್
- ಮತ್ತೊಂದು ನೈಜ ಪಾತ್ರದಲ್ಲಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್
- ಅಯೋಧ್ಯೆಯಲ್ಲಿ ಶ್ರೀರಾಮ್ಭೂಮಿ ಚಿತ್ರದ ಶೂಟಿಂಗ್ ಆರಂಭ
- ಚಿತ್ರಕ್ಕೆ ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನ
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಈಗಾಗಲೇ ಕೆಲ ನೈಜ ಪಾತ್ರಗಳಲ್ಲಿ ನಟಿಸಿ, ಗಮನ ಸೆಳೆದಿದ್ದಾರೆ. ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ‘ಎಮರ್ಜೆನ್ಸಿ’ಯಲ್ಲಿ ಜಯಪ್ರಕಾಶ್ ನಾರಾಯಣ್ ಪಾತ್ರಗಳಲ್ಲಿ ನೈಜವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರು ಮತ್ತೊಂದು ಹಿಂದಿ ಸಿನಿಮಾದಲ್ಲಿ ನೈಜ ಪಾತ್ರದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿಂದಿನ ಐತಿಹಾಸಿಕ ಹೋರಾಟದ ಕುರಿತಂತೆ ಹಿಂದಿಯಲ್ಲಿ ‘ಶ್ರೀರಾಮ ಭೂಮಿ’ ಎಂಬ ಸಿನಿಮಾ ಸಿದ್ಧವಾಗುತ್ತಿದ್ದು, ಸದ್ಯ ಅಯೋಧ್ಯೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟ ಅನುಪಮ್ ಖೇರ್, ವಿಶ್ವ ಹಿಂದೂ ಪರಿಷತ್‌ನ ಹಿರಿಯ ಮುಂದಾಳು ಅಶೋಕ್ ಸಿಂಘಲ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಕೆಲ ಫೋಟೋಗಳು ವೈರಲ್ ಆಗಿದ್ದು, ಖುದ್ದು ಅವರೇ ತಮ್ಮ ಪಾತ್ರದ ಫೋಟೋ ಹಂಚಿಕೊಂಡು ಖಚಿತಪಡಿಸಿದ್ದಾರೆ. ಶ್ವೇತವಸಧಾರಿಯಾಗಿ ಹಣೆಯ ಮೇಲೆ ವಿಭೂತಿ, ಕುಂಕಮ ಇಟ್ಟುಕೊಂಡಿರುವ ಅನುಪಮ್, ಥೇಟ್ ಅಶೋಕ್ ಸಿಂಘಲ್ ತದ್ರೂಪಿಯಂತೆ ಕಾಣಿಸಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದು ಪಾತ್ರದ ಬಗ್ಗೆ ಅನುಪಮ್ ಖೇರ್, ‘ರಾಮ ಜನ್ಮಭೂಮಿ ಹೋರಾಟದಲ್ಲಿ ಅಶೋಕ್ ಸಿಂಘಲ್‌ರ ಹೋರಾಟ, ದಕ್ಷತೆ, ದೃಢತೆ ಮೆಚ್ಚವಂಥದ್ದು. ಅವರು ಎಂದಿಗೂ ನಾಯಕರಾಗಿರಲಿಲ್ಲ, ಅವರೊಬ್ಬ ಶ್ರೀರಾಮನ ಪರಮಭಕ್ತ ಹಾಗೂ ಸೇವಕರಾಗಿದ್ದರು. ಅವರ ನಂಬಿಕೆ, ದೃಢವಿಶ್ವಾಸ ಹೋರಾಟಕ್ಕೆ ಚೈತನ್ಯ ತುಂಬಿತ್ತು. ಇಂತಹ ಚಾರಿತ್ರಿಕ ವ್ಯಕ್ತಿಯ ಪಾತ್ರ ನಿರ್ವಹಿಸುವ ಬಹುದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಚೆನ್ನಾಗಿ ನಿರ್ವಹಿಸುತ್ತೇನೆ ಎಂಬ ನಂಬಿಕೆಯಿದೆ’ ಎಂದು ಹೇಳಿಕೊಂಡಿದ್ದಾರೆ. ‘ದ ಕೇರಳ ಸ್ಟೋರಿ’ ಖ್ಯಾತಿಯ ಕಾಮಾಕ್ಯ ನಾರಾಯಣ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಳಿದ ತಾರಾ, ತಾಂತ್ರಿಕ ಬಳಗದ ಬಗ್ಗೆ ಇನ್ನಷ್ಟೇ ಘೋಷಿಸಬೇಕಿದೆ. -ಏಜೆನ್ಸೀಸ್