ನ್ಯೂಸ್

ಅಂಕಣ, ಅನುಭಾವದ ಬೆಳಗು; ಮಾಯಾಮಿಥ್ಯಾತ್ವ ಸ್ವರೂಪ

ಮಾಯೆಯ ಸ್ವರೂಪವನ್ನು ತಿಳಿಯಲು ನಾವು ‘ವಿದ್ಯೆ’ಯನ್ನು ಅವಲಂಬಿಸಬೇಕು. ಅವಿದ್ಯೆ ಎಂಬುದೇನುಂಟೋ ಅದು ತಾಮಸವಾದ ತಿಳಿವಳಿಕೆ. ಅದು ಸದಾ ಸತ್ಯವನ್ನು ಮರೆಮಾಚುತ್ತದೆ. ಅದು ವಸ್ತುವಿನ ಯಥಾರ್ಥತೆಗೆ ವಿರುದ್ಧವಾದದ್ದನ್ನು ಗ್ರಹಿಸುವಂತೆಯೋ ಸಂಶಯವನ್ನು ಉಂಟುಮಾಡುವಂತೆಯೋ ವಿಷಯವು ಏನನ್ನೂ ಗ್ರಹಿಸದಂತೆ ಮಾಡತಕ್ಕದ್ದಾಗಿಯೋ ಇರುತ್ತದೆ. ಆಚಾರ್ಯ ಶಂಕರ ಭಗವತ್ಪಾದರು ಗೀತಾಭಾಷ್ಯದಲ್ಲಿ ‘‘ತಾಮಸೋ ಹಿ ಪ್ರತ್ಯಯಃ ಆವರಣಾತ್ಮಕತ್ವಾತ್ ಅವಿದ್ಯಾ’’ (13.2) ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಮೂಬಗೆ. ವಿಪರೀತ ಜ್ಞಾನ, ಸಂಶಯಜ್ಞಾನ ಮತ್ತು ಜ್ಞಾನಾಭಾವ. ಅವಿದ್ಯೆಯ ನೆಲೆಗಳು ವಿಚ್ಛಿತ್ತಿಯಾದರೆ ‘ವಿದ್ಯೆ’ಯು ಸಾಧಕನಲ್ಲಿ ನೆಲೆಗೊಳ್ಳುತ್ತದೆ. ಮಹಲಿಂಗರಂಗನು:

ತಂತುವೇ ಪಟ, ಮೃತ್ತಿಕೆಯೆ ಘಟ

ವಂತು ಜಲವೆ ತರಂಗವಾ ಪರಿ

ಯಂತೆ ಸ್ವರ್ಣವೆ ವಿವಿಧ ಭೂಷಣವಾಗಿ ತೋರ್ಪಂತೆ |

ಅಂತವಿಲ್ಲದ ಪಾರಬ್ರಹ್ಮದೊ

ಳಿಂತು ಕಾರಣಕಾರ್ಯವೆಂಬುದು

ಭ್ರಾಂತಿಯಲ್ಲದೆ ಬೇರೆ ತೋರ್ಪ ಪ್ರಪಂಚವಿಲ್ಲೆಂದ || 8.16

ಭ್ರಾಂತಿಗೆ ಅವಿದ್ಯೆಯು ಮೂಲವಾದುದು. ಈ ಹಿನ್ನೆಲೆಯಲ್ಲಿ ಮಹಲಿಂಗರಂಗನು ಕೆಲವು ಸಾಮತಿಗಳನ್ನು ನೀಡುತ್ತಾನೆ. ‘‘ಬಟ್ಟೆ ನೂಲಿನಿಂದ ಆಗುತ್ತದೆ. ಮಡಕೆಯು ಮಣ್ಣಿನಿಂದ ಆಗುತ್ತದೆ. ತೆರೆತೆರೆಗಳಿಗೆ ನೀರು ಕಾರಣವಾಗುತ್ತದೆ. ಅದೇ ರೀತಿ ಚಿನ್ನದಿಂದ ವಿವಿಧ ರೀತಿಯ ಆಭರಣಗಳು, ಬೇರೆ ಬೇರೆ ಅಲಂಕಾರವಸ್ತುಗಳು ಆಗುವಂತೆ; ಕೊನೆಯಿಲ್ಲದ ಅಪಾರಬ್ರಹ್ಮದಲ್ಲಿ ಜಗತ್ತು ಕಾರ್ಯವೆಂದೂ ಬ್ರಹ್ಮ ಕಾರಣವೆಂದೂ ಹೇಳುವುದು ಕೇವಲ ಭ್ರಾಂತಿಯೇ ಸರಿ.

ಅಲ್ಲಿ ಬೇರೆಯಾಗಿಯೇ ತೋರುವ ಜಗತ್ತೆಂಬುದು ಇಲ್ಲ.’’ ಇದು ಈ ಪದ್ಯದ ಸ್ಥೂಲವಾದ ಅರ್ಥ. ‘ಬ್ರಹ್ಮ’ವನ್ನು ನಾವು ಕಾರ್ಯ-ಕಾರಣವಾಗಿ ತಿಳಿಯಲು ಸಾಧ್ಯವಿಲ್ಲ. ಲೋಕವೇನೊ ಕಾರ್ಯ ಆಗುವುದಕ್ಕೆ ಕಾರಣವೊಂದನ್ನು ಹುಡುಕಿ ಹೇಳುತ್ತದೆ. ಬಟ್ಟೆ ಆಗುವುದಕ್ಕೆ ನೂಲು ಕಾರಣ, ಮಡಕೆ ಆಗಲು ಮೃತ್ತಿಕೆ ಕಾರಣವೆಂಬುದು ಕೇವಲ ‘ಪ್ರಾತಿಭಾಸಿಕ ಸತ್ಯ’ ಮಾತ್ರ. ಬ್ರಹ್ಮನ ಕಾರಣದಿಂದ ಈ ಜಗತ್ತಾಗಿದೆ ಎಂಬುದು ಶುದ್ಧ ಭ್ರಾಂತಿಯೇ ಸರಿ.

ಜಗತ್ತಿನ ಸೃಷ್ಟಿ ಮೊದಲಾದ್ದನ್ನು ವೇದವಾಕ್ಯಗಳು ಹೇಳುತ್ತವೆ. ಅವು ಆತ್ಮೆ ೖಕತ್ವವನ್ನು ತಿಳಿಸಿಕೊಡುವ ಕಡೆಗೆ ಬುದ್ಧಿಯು ಪ್ರವೇಶ ಮಾಡಲೆಂದು ಹೊರಟಿವೆ. ಹೀಗಾಗಿ, ಅವು ಬೇರೆ ಉದ್ದೇಶಕ್ಕಾಗಿ ಹೊರಟಿವೆ ಎಂದು ಕಲ್ಪಿಸುವುದು ಸುತಾರಾಂ ಸರಿಯಲ್ಲ. ಈ ಮರ್ಮವು ಮಹಲಿಂಗರಂಗನಿಗೂ ಗೊತ್ತು:

ಬೀಜ ಪಂಚಕದಿಂದಲೀ ಜಗ

ಭೂಜದಂದದಲಾಗಲಾ ನಿಜ

ಬೀಜವಹ ಬ್ರಹ್ಮದಲಿ ಜನಿಸಿತು ಬೀಜಪಂಚಕವು; |

ಸೋಜಿಗವೆ? ‘‘ಯದ್ಬೀಜ ತತ್ಪಲ’’

ನೈಜವಾಗಿರೆ ಜೀವಲೋಕವು

ತೇಜಿಸುವ ಪರಮಾತ್ಮನಲ್ಲದೆ ಬೇರೆ ಜಗವಿಲ್ಲ || 8.18

ಈ ಪದ್ಯದ ಸಾರಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಈ ಜಗತ್ತು ಪಂಚಭೂತಗಳಿಂದ ಆಗಿದೆ. ಇದು ಮರದಂತೆ ವಿಸ್ತಾರವಾಗಿ, ಅದರ ಮೂಲವಾದ ಬೀಜದ ಬ್ರಹ್ಮದಲ್ಲಿ ಬೀಜಪಂಚಕವಾಗಿ ಜನಿಸಿದೆ. ಇದರಲ್ಲಿ ಸೋಜಿಗ ಏನುಂಟು? ‘ಬೀಜದಂತೆ ಫಲ’ ಎಂಬುದು ಲೋಕಸತ್ಯ. ಅದು ಸಹಜವಾಗಿರುವಾಗ ಜೀವಲೋಕವು ಪ್ರಕಾಶಿಸುವ ಪರಮಾತ್ಮ ಆಗಿರುವನೇ ಹೊರತು ಬೇರೆ ಜಗತ್ತೆಂಬುದಿಲ್ಲ.’’ ಈ ಪದ್ಯದಲ್ಲಿ ‘ಬೀಜಪಂಚಕ’ ಎಂಬ ಮಾತು ಬಂದಿದೆ.

ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಈ ಐದು ಭೂತಗಳು ಸೂಕ್ಷ್ಮ ತನ್ಮಾತ್ರೆಗಳೆನಿಸುತ್ತವೆ. ‘ಭೂಜದಂದದಲಿ’ ಎಂಬ ಮಾತಿದೆಯಷ್ಟೆ. ‘ಮರದಂತೆ ವಿಸ್ತಾರವಾಗಿ’ ಎಂದು ಇದರ ವಾಚ್ಯಾರ್ಥ.

ಗೀತೆಯು ‘‘ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ’’ ಎಂದು ಹೇಳಿದೆಯಷ್ಟೆ. ನಿಜವಾದ ಬೀಜಸ್ವರೂಪವಾದ ಬ್ರಹ್ಮದಿಂದ ಎಂದರ್ಥ. ಪರಮಾತ್ಮನು ಬೀಜವಾಗಿಯೂ ಜಗತ್ತು ಅದರ ಫಲವಾಗಿಯೂ ಇರುವುದರಿಂದ ಜಗತ್ತು ಪರಮಾತ್ಮನೇ ಹೊರತು ಬೇರೆ ಅಲ್ಲವೆಂಬುದು ವಿದಿತವಾಗುತ್ತದೆ. ಬುತ್ತಿಯ ಗಂಟನ್ನು ಹೊತ್ತುಕೊಂಡ ಮನುಷ್ಯನು, ದಾರಿಯಲ್ಲಿ ಆಯಾಸಗೊಂಡು, ಕಡೆಯಲ್ಲಿ ಆಹಾರವನ್ನು ಹೊಟ್ಟೆಗೆ ಸೇರಿಸಿ ಆಯಾಸವನ್ನು ಪರಿಹರಿಸಿಕೊಳ್ಳುವಂತೆ; ಇದು ಬೇರೆ, ತಾನು ಬೇರೆ ಎಂಬ ಭೇದವನ್ನು ಬಿಟ್ಟು ಏಕತ್ವವನ್ನು ಹೊಂದಿದಾಗ ಕಷ್ಟವನ್ನು ಕಳೆದುಕೊಂಡು ಸುಖವನ್ನು ಹೊಂದುತ್ತಾನೆ.

ಭೇದವು ಭ್ರಾಂತಿಯನ್ನು ಹುಟ್ಟಿಸುತ್ತದೆ. ಅದು ಏಕತ್ವ ಭಾವನೆಯಿಂದ ಅನೇಕತ್ವದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಹೀಗೆ ಸಾಧಕನಲ್ಲಿ ಭೇದ ಮತ್ತು ಅನೇಕತ್ವದ ಕಾರಣವನ್ನು ಹುಟ್ಟಿಸಿ, ಅಧ್ಯಾತ್ಮದ ಹಾದಿಯಿಂದ ಪಕ್ಕಕ್ಕೆ ಸರಿಸಿಬಿಡುತ್ತದೆ. ಅಧ್ಯಾತ್ಮವು ಸಾಧಕನ ಪರಮ ದೀವಿಗೆಯಾದಾಗ ಮಾತ್ರ ಭ್ರಾಂತಿಯು ಕರಗಿಹೋಗುತ್ತದೆ.