ನ್ಯೂಸ್

ಕರೊನಾ ವೈರಸ್​ನ್ನು 48ಗಂಟೆಯಲ್ಲೇ ನಿರ್ಮೂಲನೆ ಮಾಡಬಲ್ಲದು ಆ್ಯಂಟಿ-ಪ್ಯಾರಾಸಿಟಿಕ್​; ಭರವಸೆ ಮೂಡಿಸಿದ ಆಸ್ಟ್ರೇಲಿಯನ್​ ವಿಜ್ಞಾನಿಗಳು

ಮೆಲ್ಬೋರ್ನ್​: ಕರೊನಾ ವೈರಸ್​ಗೆ ಔಷಧವಾಗಲಿ, ಲಸಿಕೆಯಾಗಲಿ ಇಲ್ಲ. ಬದಲಿಗೆ ಆ್ಯಂಟಿ ಮಲೇರಿಯಾ, ಆ್ಯಂಟಿ ಎಚ್​​ಐವಿ ಔಷಧಗಳಿಂದಲೇ ಕರೊನಾಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆ ಮೆಡಿಸಿನ್​ಗಳಿಂದ ಸೈಡ್​ ಎಫೆಕ್ಟ್​ಗಳು ಆಗುತ್ತಿವೆ.

ಸದ್ಯ ಹೊಸ ಸಂಶೋಧನೆಯೊಂದು ಸಣ್ಣ ಭರವಸೆ ಹುಟ್ಟಿಸಿದೆ. ಆ್ಯಂಟಿ-ಪ್ಯಾರಾಸಿಟಿಕ್​ ಔಷಧ ಐವರ್ಮೆಕ್ಟಿನ್ ಕರೊನಾ ವೈರಸ್​ಗಳನ್ನು 48ಗಂಟೆಗಳಲ್ಲಿ ಕೊಲ್ಲುತ್ತದೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್​​ನಲ್ಲಿರುವ ಮೊನಾಶ್ ವಿಶ್ವವಿದ್ಯಾಲಯದ ಬಯೋಮೆಡಿಸಿನ್ ಡಿಸ್ಕವರಿ ಸಂಸ್ಥೆ ಮತ್ತು ಪೀಟರ್ ಡೊಹೆರ್ಟಿ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷನ್​ ಮತ್ತು ಇಮ್ಯೂನಿಟಿ ಜಂಟಿ ಅಧ್ಯಯನ ನಡೆಸಿದ್ದು, ಕರೊನಾ ವೈರಸ್​​ಗಳ ನಿರ್ಮೂಲನೆಯಲ್ಲಿ ಆ್ಯಂಟಿ ಪ್ಯಾರಾಸಿಟಿಕ್​ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಸದ್ಯ ಈ ಆ್ಯಂಟಿ ಪ್ಯಾರಾಸಿಟಿಕ್​ ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಜ್ವರಕ್ಕೆ, ದೇಹದೊಳಗೆ ಬೆಳೆಯುವ ಪರಾವಲಂಬಿ ಜೀವಿಗಳನ್ನು ಕೊಲ್ಲಲು ಈ ಔಷಧವನ್ನು ಬಳಸಲಾಗುತ್ತದೆ.

ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಕೈಲಿ ವ್ಯಾಗ್‌ಸ್ಟಾಫ್ ಅವರು ಮಾಹಿತಿ ನೀಡಿದ್ದು, ಆ್ಯಂಟಿ ಪ್ಯಾರಾಸಿಟಿಕ್​ ಔಷಧದ ಒಂದು ಡೋಸ್​ನಿಂದ ಆರ್​​ಎನ್​​ಎ ವೈರಸ್​​ಗಳು 48ಗಂಟೆಗಳಲ್ಲಿ ಮೂಲಭೂತವಾಗಿ ನಿರ್ಮೂಲನೆಯಾಗುವುದು ಕಂಡುಬಂತು. ಬರೀ 24ಗಂಟೆಯಲ್ಲಿ ವೈರಸ್​ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂತು ಎಂದು ತಿಳಿಸಿದ್ದಾರೆ.

ಐವರ್ಮೆಕ್ಟಿನ್ (Ivermectin)ಪ್ರಮುಖ ಪ್ಯಾರಾಸಿಟಿಕ್​ ಆಗಿದ್ದು, ಆಹಾರ ಮತ್ತು ಔಷಧಿ ಆಡಳಿತ ಮಂಡಳಿಯಿಂದ ಅನುಮೋದನೆಗೊಂಡಿದೆ. ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವೂ ಇದೆ. ಹಾಗೇ ಎಚ್​ಐವಿ, ಡೆಂಘೆ, ಇನ್​​​ಫ್ಲ್ಯೂಯೆಂಜಾ, ಝಿಕಾದಂತಹ ವ್ಯಾಪಕ ಶ್ರೇಣಿಯ ವೈರಸ್​​ಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡುವ ಶಕ್ತಿ ಹೊಂದಿದೆ.

ಈ ಪ್ಯಾರಾಸಿಟಿಕ್​ನ್ನು ಮನುಷ್ಯರ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನೀಡಬೇಕು, ಚಿಕಿತ್ಸಾ ವಿಧಾನ ಹೇಗಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅಧ್ಯಯನ ಮಾಡಿ, ಮನುಷ್ಯರ ಮೇಲೆ ಪ್ರಯೋಗ ಮಾಡುವುದು ನಮ್ಮ ಮುಂದಿನ ಹೆಜ್ಜೆ ಎಂದು ವ್ಯಾಗ್‌ಸ್ಟಾಫ್ ತಿಳಿಸಿದ್ದಾರೆ. (ಏಜೆನ್ಸೀಸ್​)