ನವದೆಹಲಿ: ಶತ್ರುರಾಷ್ಟ್ರ ಚೀನಾ ಜತೆ ದೇಶದ ರಹಸ್ಯ ವಿಷಯಗಳನ್ನು ಹಂಚಿಕೊಂಡ ಆರೋಪದ ಮೇಲೆ ಫ್ರೀಲ್ಯಾನ್ಸ್ ಪತ್ರಕರ್ತನನ್ನು ಬಂಧಿಸಿರುವ ದೆಹಲಿ ಪೊಲೀಸರು, ಆತ ನೀಡಿದ ಸುಳಿವಿನ ಮೇರೆಗೆ ಮತ್ತಿಬ್ಬರನ್ನು ಕೂಡ ಬಂಧಿಸಿದ್ದಾರೆ.
ಚೈನೀಸ್ ಸ್ಪೈ ಏಜೆನ್ಸಿ ಜತೆ ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿತ ಮಾಹಿತಿಗಳನ್ನು ಹಂಚಿಕೊಂಡಿದ್ದ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಎಂಬುವವನನ್ನು ದೆಹಲಿ ಪೊಲೀಸ್ ವಿಶೇಷ ತನಿಖಾ ದಳದ ಪೊಲೀಸರು ಈಗಾಗಲೇ ಬಂಧಿಸಿದ್ದರು.
ಆತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ ಪೊಲೀಸರು, ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಚೈನೀಸ್ ಮಹಿಳೆ ಹಾಗೂ ಆಕೆಯ ನೇಪಾಳಿ ಸಂಗಾತಿಯನ್ನೂ ಶನಿವಾರ ವಶಪಡಿಸಿಕೊಂಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಚೀನೀ ಮಹಿಳೆ ಹಾಗೂ ಆಕೆಯ ಸಂಗಾತಿ ಇಬ್ಬರೂ ರಾಜೀವ್ ಶರ್ಮಾಗೆ ದೊಡ್ಡ ಮೊತ್ತದ ಹಣ ನೀಡುತ್ತಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. (ಏಜೆನ್ಸೀಸ್)