ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರಗಳು ಪ್ರಾರಂಭಿಕ ಹಂತದಲ್ಲಿ ಇದ್ದು, ಈವರೆಗೂ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೈತ್ರಿಗೆ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿಗೆ ಒಪ್ಪಿಗೆ ಸೂಚಿದ್ದಾರಾ ಎನ್ನುವ ಪ್ರಶ್ನೆಗೂ ಕಾದು ನೋಡಿ ಎಂದಷ್ಟೇ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈತ್ರಿಕೂಟದ ಬಗ್ಗೆ ಅವರು ಹೇಳಿದ್ದಾರೆ. ರಾಜ್ಯದ ಜನರನ್ನು ಲೂಟಿ ಮಾಡುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ. 2006ರಲ್ಲಿಯೂ ನಾನು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೂರೇ ತಿಂಗಳಿಗೆ ಜನರು ರೋಸಿ ಹೋಗಿದ್ದಾರೆ. ಯಾವುದೇ ಸರ್ಕಾರಕ್ಕೆ ನಾಲ್ಕು ವರ್ಷ ಕಳೆದ ಮೇಲೆ ಆಡಳಿತ ವಿರೋಧಿ ಅಲೆ ಎದುರಾಗುತ್ತದೆ. ಆದರೆ ಈ ಸರ್ಕಾರ ಮೂರೇ ತಿಂಗಳಿಗೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇಂಥ ಸರ್ಕಾರದ ವಿರುದ್ಧ ಸಂಘಟಿವಾಗಿ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ಮೈತ್ರಿಯ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ. ರಾಜ್ಯದ ಹಿತದೃಷ್ಟಿಯಿಂದ ಈ ರೀತಿಯ ಕೆಲವು ತೀರ್ಮಾನವಾಗುತ್ತದೆ. ಕೆಲದಿನ ಕಾದು ನೋಡಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಕೆಲವರು ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾರೆ. ಅದರ ಬಗ್ಗೆ ಮುಂದೆ ಮಾತನಾಡೋಣ. ಇನ್ನು ಮೈತ್ರಿ ವಿಷಯಕ್ಕೆ ಬಂದರೆ ಅದಕ್ಕೆ ಇನ್ನೂ ಸಮಯ ಇದೆ. ಇನ್ನು ಹಲವಾರು ವಿಚಾರಗಳ ಬಗ್ಗೆ ಚರ್ಚೆ ಆಗಬೇಕಿದೆ. ಇಲ್ಲಿ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದಲ್ಲ. ವಿಶ್ವಾಸ, ಗೌರವ ಮುಖ್ಯ ಎಂದು ತಿಳಿಸಿದರು.
ದಿನೇಶ್ ಗುಂಡೂರಾವ್ ವಿರುದ್ಧ ಕಿಡಿ
ಕಾಂಗ್ರೆಸ್‌ನ ಯಾರೋ ಒಬ್ಬರು ನಾಯಕರು, ‘ನಾಯಿ ಹಸಿದಿತ್ತು, ಅನ್ನ ಹಳಸಿತ್ತು’ ಎಂದು ಹೇಳಿದ್ದಾರೆ. 2018ರಲ್ಲಿ ಅವತ್ತು ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಅವತ್ತು ನಮ್ಮ ಮನೆಗೆ ಬಂದಿದ್ದವರು ಯಾರು? ಎಂದು ಸಚಿವ ದಿನೇಶ್ ಗುಂಡೂರಾವ್‌ಗೆ ತಿರುಗೇಟು ಕೊಟ್ಟರು.
ರಾಜ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದೇನೆ. ಅಮಲಿನಲ್ಲಿ ನಾವು ಏನೋ ಮಾಡಿಬಿಟ್ಟಿದ್ದೇವೆ, ಜೆಡಿಎಸ್ ಪಕ್ಷವನ್ನು ಮುಗಿಸಿಬಿಟ್ಟಿದ್ದೇವೆ, ಅಲ್ಲಿಂದ ಇಲ್ಲಿಂದ ಕರೆದುಕೊಂಡು ಬರುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.