ನ್ಯೂಸ್

ಅಂತರಂಗ; ಪ್ರವಾದಿಗಳ ವಚನರತ್ನಗಳು

malli
ಪ್ರವಾದಿ ಮುಹಮ್ಮದ್ ಪೈಗಂಬರರ (ಸ) ಈ ವಚನಗಳಲ್ಲಿ ಅಲ್ಲಾಹನ ಭಯ ಹಾಗೂ ಸಚ್ಚಾರಿತ್ರ್ಯ ನೈಜ ಮಾನದಂಡ, ಸತ್ಯ, ಸಾರ್ವತ್ರಿಕ ಕರುಣೆ, ಸಹಾನುಭೂತಿ, ಮನಸ್ಸಿನ ಶ್ರೀಮಂತಿಕೆ, ಕಾರ್ವಿುಕರ ಹಕ್ಕು, ದಯೆ, ಆತ್ಮನಿಯಂತ್ರಣ, ಭಕ್ತಿ, ಅನ್ಯರ ವಸ್ತುಗಳನ್ನು ಜಮೀನನ್ನು ಕಬಳಿಸದಿರುವುದು, ಬಾಂಧವ್ಯದ ರಕ್ಷಣೆ, ಧನಮೋಹ, ನಿಷಿದ್ಧ ಆಹಾರ, ಮಾನವ ಸಂಬಂಧವನ್ನು ಕೆಡಿಸುವ ವಿಷಯಗಳು, ಪಕ್ಷಪಾತ, ವಂಚನೆ, ಅನರ್ಹರಿಗೆ ಅಧಿಕಾರ ದೊರೆತರೆ ಆಗುವ ಅನ್ಯಾಯ, ತೊಂದರೆ ಮುಂತಾದ ಮೌಲಿಕವೂ ಅರ್ಥಪೂರ್ಣವೂ ಆದ ಸಂಗತಿಗಳನ್ನು ಮನಮುಟ್ಟುವಂತೆ ತಿಳಿಸಿದ್ದಾರೆ.

‘ಸತ್ಯವನ್ನು ಅನುಸರಿಸಿ. ಅದು ಒಳಿತಿನ ಕಡೆಗೆ ಕರೆದೊಯ್ಯುತ್ತದೆ. ಒಳಿತು ಸ್ವರ್ಗದ ಕಡೆಗೆ ಒಯ್ಯುತ್ತದೆ. ಮನುಷ್ಯನು ಸತ್ಯವನ್ನೇ ಹೇಳುತ್ತ ಸತ್ಯವನ್ನೇ ಅನುಸರಿಸುತ್ತಿದ್ದರೆ ಅಲ್ಲಾಹನ ಹತ್ತಿರ ಅವನನ್ನು ‘ಸಿದ್ದೀಕ್’ (ಪರಮ ಸತ್ಯವಂತ) ಎಂದು ದಾಖಲು ಮಾಡಲಾಗುತ್ತದೆ. ಸುಳ್ಳಿನಿಂದ ದೂರವಿರಿ. ಸುಳ್ಳು ಕೆಡುಕಿನಡೆಗೆ ಕೊಂಡೊಯ್ಯುತ್ತದೆ ಹಾಗೂ ಕೆಡುಕು ನರಕದೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯ ಸುಳ್ಳನ್ನು ಹೇಳುತ್ತಿದ್ದರೆ ಹಾಗೂ ಸುಳ್ಳನ್ನೇ ಅನುಸರಿಸುತ್ತಿದ್ದರೆ ಕೊನೆಗೆ ಅಲ್ಲಾಹನ ಹತ್ತಿರ ಅವನನ್ನು ‘ಪರಮ ಸುಳ್ಳುಗಾರ’ ಎಂದು ಬರೆದಿಡಲಾಗುತ್ತದೆ.’

‘ಮಾನವರ ಮೇಲೆ ಕರುಣೆಯನ್ನು ತೋರದ ವ್ಯಕ್ತಿಯ ಮೇಲೆ ಅಲ್ಲಾಹನು ಕೂಡ ಕರುಣೆ ತೋರಿಸುವುದಿಲ್ಲ.’ ‘ಹಸಿದವರಿಗೆ ಆಹಾರವನ್ನು ಕೊಡಿ. ರೋಗಿಯನ್ನು ಸಂದರ್ಶಿಸಿ. ಕೈದಿಯನ್ನು ಬಂಧನದಿಂದ ವಿಮುಕ್ತಿ ಮಾಡಿ.’ ‘ಅಲ್ಲಾಹನು ಖಂಡಿತವಾಗಿಯೂ ಮಾನವರ ರೂಪವನ್ನೂ ಐಶ್ವರ್ಯವನ್ನೂ ನೋಡುವುದಿಲ್ಲ. ಅವನು ಅವರ ಮನಸ್ಸನ್ನೂ, ಕರ್ಮಗಳನ್ನೂ ನೋಡುತ್ತಾನೆ.’

‘ಮನುಷ್ಯನು ಮಾಡುವ ದಾನವು ಆತನ ಸಂಪತ್ತನ್ನು ಕಡಿತಗೊಳಿಸುವುದಿಲ್ಲ. ಕ್ಷಮಾರ್ಹ ಗುಣವು ದಾಸನ ಗೌರವವನ್ನು ಅಲ್ಲಾಹನು ಹೆಚ್ಚು ಮಾಡುತ್ತಾನೆ. ಅಲ್ಲಾಹನಿಗಾಗಿ ವಿನಯಶೀಲತೆಯನ್ನು ಅನುಸರಿಸುವ ವ್ಯಕ್ತಿಗೆ ಅಲ್ಲಾಹನು ಔನ್ನತ್ಯವನ್ನು ದಯಪಾಲಿಸುತ್ತಾನೆ.’