ತೇನ ತ್ಯಕ್ತೇನ ಭುಂಜೀಥಾ ಮಾಗೃಧಃ ಕಸ್ಯ ಸ್ವಿದ್ಧನಮ್ ||
ಕುರ್ವನ್ನೇವೇಹ ಕರ್ವಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋರಸ್ತಿ ನಕರ್ಮ ಲಿಪ್ಯತೇ ನರೇ ||
‘ಚಲನಾತ್ಮಕ ಜಗತ್ತೆಲ್ಲ ಈಶನಿಂದ ಆವರಿಸಲ್ಪಟ್ಟಿದೆ. ಅದನ್ನು ತ್ಯಾಗ ಮಾಡಿ ಆತ್ಮರಕ್ಷಣೆ ಮಾಡಿಕೋ. ಧನದಾಶೆ ತೊರೆ. ಜಗತ್ತನ್ನು ತ್ಯಾಗ ಮಾಡಿದರೂ ಭಗವದನುಜ್ಞೆಯೆಂಬ ನಿಷ್ಠೆಯಿಂದ (ಶಾಸ್ತ್ರವಿಹಿತ) ಕರ್ಮ ಮಾಡುತ್ತ ನೂರು ವರ್ಷ ಬಾಳು. ಈ ಮಾರ್ಗವಲ್ಲದೆ ಬೇರೆ ಉಪಾಯವಿಲ್ಲ.’ ಈ ಪ್ರಪಂಚದ ಕಣಕಣಗಳಲ್ಲಿ ಆ ಪರಮಾತ್ಮನೇ ತುಂಬಿಕೊಂಡಿದ್ದಾನೆ. ಈ ಜಗತ್ತು ಈಶನ ವಾಸಸ್ಥಾನ - ಹೀಗೆಂದು ಈಶಾವಾಸ್ಯ ಉಪನಿಷತ್ತು ಹೇಳಿದರೆ ಬಸವಣ್ಣನವರು ಹೇಳಿದ್ದು ನೋಡಿ;
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲ ವಿಸ್ತಾರದ ರೂಹು ನೀನೇ ದೇವಾ
ವಿಶ್ವತೋಚಕ್ಷು ನೀನೇ ದೇವಾ
ವಿಶ್ವತೋಮುಖ ನೀನೇ ದೇವಾ
ವಿಶ್ವತೋಬಾಹು ನೀನೇ ದೇವಾ
ವಿಶ್ವತಃಪಾದ ನೀನೇ ದೇವಾ, ಕೂಡಲಸಂಗಮದೇವ
ಅಂತೂ ಸಂತರು, ಶರಣರು, ಉಪನಿಷತ್ತಿನ ದೃಷ್ಟಾರರು ಈ ಜಗತ್ತಿನಲ್ಲಿ ಬೇರೇನೂ ಕಾಣಲಿಲ್ಲ. ದೇವನೊಬ್ಬನೇ ಕಂಡರು. ಅನಂತವಾದ ಬರಿಯ ಬಯಲನ್ನು ನೋಡುವವರಿಗೆ ಭೇದ ಎಲ್ಲಿ ಕಾಣಬೇಕು? ಕಟ್ಟಿದ ಗೋಡೆಗಳನ್ನು ಮಾತ್ರ ಕಾಣುವವರಿಗೆ ಎಲ್ಲಿ ನೋಡಿದರೂ ಭೇದವೇ ಕಾಣುತ್ತದೆ.
ಸತ್ಯವಂತರು ಸದಾ ಸತ್ಯದ ಬಯಲನ್ನೇ ನೋಡುವರು. ಅವರಿಗೆ ಭೇದ ಕಾಣುವುದೇ ಇಲ್ಲ. ನಾವು ಸತ್ಯದ ಬಯಲಿನಲ್ಲಿ ಸ್ತ್ರೀ-ಪುರುಷ, ಜಾತಿ-ಮತ ಇತ್ಯಾದಿ ಗೋಡೆಗಳನ್ನು ಮಾಡಿಕೊಂಡಿದ್ದೇವೆ. ಭಿತ್ತಿಯ ಉಪಾಧಿಯಿಂದ ಬಯಲು ಒಳ-ಹೊರಗೆಂಬ ನಾಮವನ್ನು ಧರಿಸಿದೆ. ಒಳಹೊರಗೆಲ್ಲ ಇರುವುದು ಬಯಲು ಎಂದು ಅರಿತರೆ ಸಾಕು. ಎಲ್ಲಿ ನೋಡಿದರೆ ಅಲ್ಲಿ ಪರಮಾತ್ಮನೇ ಕಾಣಿಸುತ್ತಾನೆ. ಸತ್ಯದ ಆಶ್ರಯದಲ್ಲಿ ನಿರ್ವಣಗೊಂಡ ಈ ನಾಮ-ರೂಪ ಮಿಥ್ಯೆ ಎಂದು ತಿಳಿದು ಸತ್ಯವನ್ನು ಆರಾಧಿಸೋಣ.