ನ್ಯೂಸ್

ಅಂತರಂಗ: ಕೈಗಳಿಗೆ ದಾನವೇ ಭೂಷಣ

ಒಬ್ಬ ತಾಯಿ ತನ್ನ ಮಗನಿಗಾಗಿ ಏನು ಮಾಡಿದ್ದಾಳೆಂದು ಕೇಳಿ. ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವಳು ಹೇಳುತ್ತಾಳೆ. ಎಲ್ಲಿ ಕಲಿಸಬೇಕಿತ್ತೋ ಅಲ್ಲಿ ಕಲಿಸಲಾಗಲಿಲ್ಲ, ಉಣಬಡಿಸಬೇಕಾದ ಅನ್ನವನ್ನು ಉಣಿಸಲಾಗಲಿಲ್ಲ, ಉಡಬೇಕಾದ ಬಟ್ಟೆಯನ್ನು ಹಾಕಿಕೊಳ್ಳಲಾಗಲಿಲ್ಲ. ನಾನು ಹುಡುಗನಿಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅದೇ ಯಾವುದೇ ಸಂಸ್ಥೆಯ ಕಾರ್ಯದರ್ಶಿಯನ್ನು ಕೇಳಿ ಅವನ ಹೇಳಿಕೆಯೇ ಬೇರೆ. ಹಿಂದಿನವರು ಏನು ಮಾಡಿದ್ದಾರೆ? ನಾನೇನು ಮಾಡಿದ್ದೇನೆ! ಹಿಂದಿನವರು ಮಾಡಿದ ಆವಾಂತರಗಳೇನು? ನಾನು ಬಂದಮೇಲೆ ಆದ ಕೆಲಸಗಳೇನು ಎಂಬ ದೊಡ್ಡ ಪಟ್ಟಿಯನ್ನೇ ಎಲ್ಲರಿಗೂ ತೋರಿಸುತ್ತಿರುತ್ತಾನೆ.

ಆದರೆ ತಾಯಿ ಏನು ಮಾಡಿದರೂ ಅವಳು ಹಕ್ಕುದಾರಳಲ್ಲ. ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದೇ ಅವಳು ಹೇಳುತ್ತಾಳೆ. ಹಾಗಾಗಿ ‘ನಾನು ಏನನ್ನಾದರೂ ಮಾಡಿದ್ದೇನೆ’ ಎಂಬ ಭಾವನೆ ಎಂದಿಗೂ ಪ್ರೀತಿಯ ಹಿಂದೆ ಉಳಿಯುವುದಿಲ್ಲ. ‘ನಾನು ಮಾಡಿದ್ದೇನೆ’ ಎಂಬ ಭಾವನೆ ಇರುವ ದಾನವನ್ನು ಪಾಪ ಎಂದು ಕರೆಯುವರು. ಇದು ಅಹಂಕಾರದ ಪೋಷಣೆ.

ಆದ್ದರಿಂದ ಕೈಗಳಿಗೆ ದಾನವೇ ಭೂಷಣ ಹೊರತು ಕೈಗೆ ಹಾಕುವ ಕಡಗಗಳಾಗಲಿ ಬಳೆಗಳಾಗಲೀ ಅಲ್ಲ. ಶರೀರ ಶುದ್ಧವಾಗುವುದು ಕೇವಲ ಸ್ನಾನದಿಂದಲೇ ಹೊರತು ಶರೀರಕ್ಕೆ ಹಚ್ಚುವ ಕ್ರೀಮುಗಳಿಂದಲ್ಲ. ಎಷ್ಟೇ ರಾಸಾಯನಿಕ ವಸ್ತುಗಳಿಂದ ಈ ಶರೀರವನ್ನು ಹೆಚ್ಚುಹೊತ್ತು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಶಾರೀರಿಕ ಶುದ್ಧತೆ ಕೇವಲ ಸ್ನಾನದಿಂದಲೇ. ಪ್ರತಿಯೊಬ್ಬ ವ್ಯಕ್ತಿಗೂ ಅವನಿಗೆ ತಕ್ಕುದಾದ ಮನ್ನಣೆಯನ್ನು ಗೌರವವನ್ನು ಕೊಡುವುದರಿಂದ ಅವನಿಗೆ ಹೆಚ್ಚು ಸಂತೋಷವಾಗುವುದೇ ಹೊರತು ಕೇವಲ ಅವನಿಗೆ ಊಟವನ್ನು ಕೊಡುವುದರಿಂದಲ್ಲ. ಜೀವನದಲ್ಲಿ ಶರೀರಕ್ಕೆ ಹಾಕುವ ಬಟ್ಟೆಯನ್ನು ಬದಲಾಯಿಸುವುದರಿಂದ, ಅಥವಾ ಕೂದಲುಗಳನ್ನು ಬಿಡುವುದರಿಂದಾಗಲಿ, ಕೂದಲುಗಳನ್ನು ತೆಗೆಯುವುದರಿಂದಾಗಲಿ ಈ ಸಂಸಾರದಿಂದ ಮುಕ್ತಿಸಿಗಲು ಸಾಧ್ಯವಿಲ್ಲ. ಇಲ್ಲಿ ಮುಕ್ತಿಸಾಧ್ಯವಿರುವುದು ಕೇವಲ

ಜ್ಞಾನದಿಂದಲೇ ಹೊರತು ಇನ್ನಾವುದರಿಂದಲ್ಲ ಎಂಬುದೇ ಈ ಸುಭಾಷಿತದ ಭಾವಾರ್ಥ. ಇದು ಜ್ಞಾನಾದೇವತು ಕೈವಲ್ಯಂ ಎಂಬ ಉಪನಿಷತ್ತಿನ ವಾಣಿಯನ್ನೇ ಒತ್ತಿಹೇಳುತ್ತಿದೆ.