ಜಪ: ಮಂತ್ರವು ಫಲಕಾರಿಯಾಗಬೇಕಾದರೆ ಅದರ ಜಪದಿಂದಲೇ ಸಾಧ್ಯ. ಅಂದರೆ ಗುರುವಿನ ನಿರ್ದೇಶನದಂತೆ ಒಂದು ನಿರ್ದಿಷ್ಟ ಸಂಖ್ಯೆಯಲ್ಲಿ ಮಂತ್ರದ ಪುನರಾವೃತ್ತಿ ಆಗಬೇಕು.
ಜಪದಲ್ಲಿ ಮೂರು ವಿಧ - ‘ವಾಚಿಕ / ಉಚ್ಚ, ಉಪಾಂಶು ಮತ್ತು ಮಾನಸ’. ವಾಚಿಕ / ಉಚ್ಚ ಎಂದರೆ ಕೇಳಿಸುವಷ್ಟು ಗಟ್ಟಿಯಾಗಿ ಜಪ ಮಾಡುವುದು. ಉಪಾಂಶು ಅಂದರೆ ಮೆಲುದನಿಯಲ್ಲಿ - (ಪಿಸುಧ್ವನಿಯಲ್ಲಿ) ಜಪಮಾಡುವುದು. ಮಾನಸ ಅಂದರೆ ಮನಸ್ಸಿನಲ್ಲಿಯೇ ಜಪಮಾಡುವುದು. ಮಾನಸಜಪ ಅತ್ಯಂತ ಫಲಪ್ರದ ಎಂದು ಸರ್ವಸಮ್ಮತ ಅಭಿಪ್ರಾಯ. ಜಪ ಮಾಡುವಾಗ, ಎಣಿಕೆಯನ್ನು ಕೈಬೆರಳುಗಳಿಂದಾಗಲೀ, ಜಪಮಾಲೆಯಿಂದಾಗಲೀ ಮಾಡಬಹುದು. ಗುರೂಪದೇಶದಂತೆ ಜಪದ ಸಂಖ್ಯೆಗಳು ಬದಲಾಗಬಹುದು. ಉದಾ: ಅದು 10, 12,28, 32 ಅಥವಾ 108 ಆಗಬಹುದು. ಈ ಕಡೇ ಸಂಖ್ಯೆ 108 ಅತ್ಯಂತ ಜನಾದರಣೀಯವಾದುದು.
ಪುರಶ್ಚರಣ: ಮಂತ್ರಜಪಕ್ಕೆ ಸಂಬಂಧಿಸಿದಂತೆ ಒಂದು ಪ್ರಧಾನ ಅಂಶವಾದ ಪುರಶ್ಚರಣವನ್ನು ತಂತ್ರಗಳು ವಿವರಿಸಿವೆ. ಪುರಶ್ಚರಣ ಎಂಬುದಕ್ಕೆ ಅರ್ಥ: ಪುರಸ್ = ಮುಂಚೆಯೇ, ಚರಣ = ಕಾರ್ಯಮಾಡು / ಚಲಿಸು ಎಂದು. ಆದರೆ ಈ ಪದಕ್ಕೆ ಇನ್ನೂ ಇತರ ಅರ್ಥಗಳನ್ನು ಕೊಟ್ಟಿದ್ದಾರೆ.
ದೇವತೆಯ ಮೂಲಮಂತ್ರದ ಜಪದ ಅನುಷ್ಠಾನವನ್ನು ಸಿದ್ಧಿಸಿಕೊಂಡು, ಅದರ ಇಚ್ಛಿತ ವಿನಿಯೋಗ ಆಗುವ ಮುನ್ನ ಅನುಸಂಧಾನ ಮಾಡುವುದೇ ಪುರಶ್ಚರಣ ಎಂದು ಕೆಲವು ಗ್ರಂಥಗಳು ಹೇಳುತ್ತವೆ.
ಮತ್ತೆ ಕೆಲವು ಗ್ರಂಥಗಳಲ್ಲಿ ಪುರಶ್ಚರಣ ಎಂದರೆ ಸಾಧಕನ ಇಷ್ಟದೈವ, ಸಾಧಕನ ಏಕಾಗ್ರಸಾಧನೆಗೆ ಮನವೊಲಿದು, ತಾನಿದ್ದ ಕಡೆಯಿಂದ ಚಲಿಸುವನು (ಚರಣ), ಸಾಧಕನ ಮುಂದೆ (ಪುರಸ್) ಬರುವನು ಎಂದು ವಿವರಣೆ ಕೊಡಲಾಗಿದೆ.