ನಿಜವಾಗಿ ಭಾಗ್ಯವಂತರು ಯಾರು? ಇಲ್ಲಿ ಲೋಕದ ದೃಷ್ಟಿಗೂ ದೈವದ ದೃಷ್ಟಿಗೂ ಅಜಗಜಾಂತರವಿದೆ. ಲೋಕದ ದೃಷ್ಟಿಯಲ್ಲಿ ಹಣವಂತರು, ಸಮಾಜದಲ್ಲಿ ದೊಡ್ಡ ಹೆಸರು ಮಾಡಿದವರು, ಹಲವು ಪದವಿಗಳನ್ನು ಪಡೆದವರು, ಅಧಿಕಾರವುಳ್ಳವರೆಲ್ಲ ಸಹಜವಾಗಿ ಭಾಗ್ಯವಂತರ ಪಟ್ಟಿಗೆ ಸೇರುತ್ತಾರೆ. ಆದರೆ ಇವರೆಲ್ಲ ದೈವದ ಪ್ರಕಾರ ಭಾಗ್ಯವಂತರಲ್ಲ. ಯೇಸುಕ್ರಿಸ್ತರು ಭಾಗ್ಯವಂತರ ಪಟ್ಟಿಯನ್ನೇ ಕೊಡುತ್ತಾರೆ. ಅವರು ನೀಡುವ ಭಾಗ್ಯವಂತರ ಪಟ್ಟಿ ಹೀಗೆ ಸಾಗುತ್ತದೆ: ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ದುಃಖಿಗಳು ಭಾಗ್ಯವಂತರು; ವಿನಯಶೀಲರು, ನ್ಯಾಯನೀತಿಗಾಗಿ ಹಪಹಪಿಸುವವರು, ದಯಾವಂತರು, ನಿರ್ಮಲ ಹೃದಯಿಗಳು ಇವರೆಲ್ಲ ಭಾಗ್ಯವಂತರು. ಅಷ್ಟು ಮಾತ್ರವಲ್ಲ, ಶಾಂತಿಗಾಗಿ ಶ್ರಮಿಸುವವರು, ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಮತ್ತು ದೈವದ ನಿಮಿತ್ತ ಹಿಂಸೆ, ಅನ್ಯಾಯವನ್ನು ಸಹಿಸುವವರೆಲ್ಲ ಭಾಗ್ಯವಂತರು ಎನ್ನುತ್ತಾರೆ ಯೇಸು.
ಇದನ್ನೆಲ್ಲ ಒಪ್ಪಿಕೊಳ್ಳುವುದು ಹೇಗೆ? ಬಡವ ತಾನು ಭಾಗ್ಯವಂತ ಎಂದು ಬಗೆಯುವುದಾದರೂ ಹೇಗೆ? ದುಃಖಿಗಳು ಪಡೆಯುವ ಭಾಗ್ಯವಾದರೂ ಯಾವುದು? ನ್ಯಾಯನೀತಿಯ ನಿಮಿತ್ತ ಹಿಂಸೆ ಸಹಿಸುವವರು ದುರ್ಬಲರಲ್ಲದೆ ಭಾಗ್ಯವಂತರು ಹೇಗಾಗುತ್ತಾರೆ? ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ನಿಜವಾಗಿ ಕ್ಲಿಷ್ಟಕರ. ಆದಾಗ್ಯೂ ದೈವದ ನಿಯಮ ಮಾನವನ ನಿಯಮದಂತೆ ಇರುವುದಿಲ್ಲ. ದಾರಿದ್ರ್ಯು ಭಾಗ್ಯದ ಸಂಕೇತ ಅಲ್ಲದಿರಬಹುದು; ಆದರೆ ಸ್ವಾರ್ಥವನ್ನು ಮೆಟ್ಟಿ ನಿಲ್ಲಲು ಬಡತನ ಒಂದು ರೀತಿಯ ಅಸ್ತ್ರವಾಗುತ್ತದೆ. ಯಾವಾಗ ಲೋಕದಲ್ಲಿ ಸ್ವಾರ್ಥವು ಕಡಿಮೆಯಾಗುತ್ತದೋ ಆಗ ಬಡವ, ಬಲ್ಲಿದ ಎಂಬ ತಾರತಮ್ಯವೇ ಇರದು. ಅದೇ ರೀತಿ ದುಃಖಿಗಳ ಬಗ್ಗೆ ಮಾತನಾಡುವಾಗ ಯೇಸು ಸ್ವಂತಕ್ಕಾಗಿ ದುಃಖಿಸುವವರ ಬಗ್ಗೆ ಮಾತನಾಡುತ್ತಿಲ್ಲ. ಯಾರು ಪರರ ಕಷ್ಟ ಸಂಕಷ್ಟಗಳಲ್ಲಿ ಪಾಲುದಾರರಾಗುತ್ತಾರೋ ಅಂಥ ದುಃಖಿಗಳ ಕುರಿತು ಮಾತನಾಡುತ್ತಾರೆ. ಇನ್ನು ಹಿಂಸೆ ಸಹಿಸುವವರ ಕುರಿತು ಒಂದು ಮಾತು. ಯಾವಾಗ ವ್ಯಕ್ತಿ ಅನೀತಿಯ ವಿರುದ್ಧ ಮಾತನಾಡುತ್ತಾನೋ, ನ್ಯಾಯಕ್ಕಾಗಿ ಹೋರಾಡುತ್ತಾನೋ ಅಂಥವನಿಗೆ ಹಿಂಸೆ ಕಟ್ಟಿಟ್ಟ ಬುತ್ತಿ. ಇತಿಹಾಸದುದ್ದಕ್ಕೂ ಆ ರೀತಿ ಹಿಂಸಿಸಲ್ಪಟ್ಟ ಲಕ್ಷಾಂತರ ಮಂದಿಯನ್ನು ಕಾಣುತ್ತೇವೆ. ಇವರೆಲ್ಲ ಪರರ ಒಳಿತನ್ನು ಬಯಸಿ ಭಾಗ್ಯವಂತರಾದವರು. ಒಟ್ಟಾರೆ ಎಲ್ಲ ಭಾಗ್ಯವಂತರಲ್ಲಿ ಇರುವ ಸಾಮಾನ್ಯ ಗುಣವೆಂದರೆ ಅವರೆಲ್ಲ ಪರರ ಏಳ್ಗೆಯನ್ನು ಗುರಿಯಾಗಿಸಿಟ್ಟುಕೊಂಡು ಶ್ರಮಪಟ್ಟ ವ್ಯಕ್ತಿಗಳು.