Cyber crime: ದಿನೇ ದಿನೇ ಹೆಚ್ಚುತ್ತಿರುವ ಸೈಂಬರ್ ವಂಚನೆ ಪ್ರಕರಣದಲ್ಲಿ 35 ವರ್ಷದ ಬ್ಯಾಗ್ ವ್ಯಾಪಾರಸ್ಥನೊಬ್ಬ ಮದುವೆ ಆಮಂತ್ರಣ ಪತ್ರಿಕೆ ಎಂದು ವಾಟ್ಸ್ಆಪ್ ಲಿಂಕ್ ಕ್ಲಿಕ್ ಮಾಡಿ, ಸುಮಾರು 1.62 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಸಂತ್ರಸ್ತ ಇರ್ಫಾನ್ ಅಬ್ದುಲ್ ಮನ್ನನ್ ಫಾರೂಕಿ ಹಣ ಕಳೆದುಕೊಂಡವರು ಎಂದು ತಿಳಿದುಬಂದಿದೆ. ಆನ್ಲೈನ್ ವಂಚಕರು ವಾಟ್ಸ್ಆಪ್ ಲಿಂಕ್ ಬಳಸಿ ಮೊಬೈಲ್ ಹ್ಯಾಕ್ ಮಾಡಿ, ಅನಧಿಕೃತ ಆನ್ಲೈನ್ ಮೂಲಕ ಹಣವನ್ನು ದೋಚಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಉಮರವಾಡಿ ರಸ್ತೆಯ ಕುರ್ಲಾ ಪ್ರದೇಶದಲ್ಲಿ ವಾಸಿಸುತ್ತಿರುವ ಸಿರಿನ್‌ಬಾಯಿ ಚಾವ್ಲ್‌ನ ಹಾಗೂ ಬ್ಯಾಗ್ ವ್ಯಾಪಾರಸ್ಥನಾಗಿದ್ದ ಫಾರೂಕಿ ಅವರಿಗೆ ಜುಲೈ 31 ರಂದು ರಾತ್ರಿ ಯಾಹ್ಯಾ ಭಾಯ್ ಎಂಬುವವರಿಗೆ ಪರಿಚಿತ ವ್ಯಕ್ತಿಯ ವಾಟ್ಸ್ಆಪ್ನಿಂದ ಕಳುಹಿಸಲಾದ ಸಂದೇಶದಲ್ಲಿ "Wedding Invitation.apk" ಎಂಬ ಲಿಂಕ್ ಇತ್ತು ಎನ್ನಲಾಗಿದೆ.
ಫರೂಕಿ ವಾಟ್ಸಾಪ್ನಲ್ಲಿ ಕಳುಹಿಸಿದ ಲಿಂಕ್ನನ್ನು ಕ್ಲಿಕ್ ಮಾಡಿದ ತಕ್ಷಣ ಆತನ ಮೊಬೈಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗೇ ಮುಂದಿನ ಮೂರು ದಿನಗಳು ಸಹ ಹಾಗೆ ಮಾಡಲಾರಂಭಿಸಿತು. ಇನ್ನು ತನ್ನ ಮೊಬೈಲ್ನ್ನು ಸೋದರಳಿಯ ಉಮರ್ಗೆ ತೋರಿಸಿದನು.ಆಗ ಉಮರ್ ಫರೂಕಿ ಫೋನ್ನಲ್ಲಿ ಸದ್ದಿಲ್ಲದೆ ಒಂದು ಆ್ಯಪ್ ಡೌನ್ಲೋಡ್ ಆಗಿರುವುದನ್ನು ಕಂಡುಹಿಡಿದಿದ್ದಾನೆ.
ಆಗಸ್ಟ್ 4ರಂದು ಫರೂಕಿ ಅವರ ಮೊಬೈಲ್ಗೆ ಜಿಯೋ ಮಾರ್ಟ್, ನವಿ, ಹಾಗೂ ಅಕರ ಎಂಬ ಅಪರಿಚಿತ ಮೂಲಗಳಿಂದ ಸಂದೇಶವನ್ನು ಪಡೆದಿದ್ದು, ಅದನ್ನು ಮೊದಲು ತಿರಸ್ಕರಿಸಿದ್ದಾರೆ. ನಂತರ ಆತನ ಇಂಡಿಯನ್ ಬ್ಯಾಂಕ್ ಖಾತೆಯಿಂದ 62,500ರೂ ಗಳು ಬೇರೆ ಅಕೌಂಟ್ಗೆ ಜಮಾ ಆಗಿದ್ದನ್ನು ಕಂಡು ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಲ್ಲಿದ್ದ 1 ಲಕ್ಷ ರೂಪಾಯಿಗಳನ್ನು ಬೇರೆ ಅಕೌಂಟ್ಗಳಿಗೆ ಡೆಬಿಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಫರೂಕಿ ಅವರಿಗೆ ಲಿಂಕ್ ಕಳುಹಿಸಿದ ವ್ಯಕ್ತಿ ಯಾಹ್ಯಾ ಭಾಯ್ ಅವರನ್ನು ಪ್ರಶ್ನಿಸಿದಾಗ ಅವರ ಮೊಬೈಲ್ ಹ್ಯಾಕ್ ಆಗಿದ್ದು, 2 ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಫರೂಕಿ ತಾನು ಮೋಸ ಹೋಗಿರುವುದನ್ನು ಕಂಡುಕೊಂಡಿದ್ದು, ಸೈಬರ್ ಅಪರಾಧ ಸಹಾಯವಾಣಿಗೆ ವರದಿ ಮಾಡಿದ್ದು, ನಾಗಪಾಡಾ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದೂರು ದಾಖಲಿಸಿದ್ದಾರೆ.
ಮಾಹಿತಿಯ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)