ನ್ಯೂಸ್

ಬಾಯಿಹುಣ್ಣು ಕಾಣಿಸಿಕೊಂಡಿದೆಯೇ- ಕರೊನಾ ಟೆಸ್ಟ್ ಮಾಡಿಸಿಕೊಳ್ಳಿ!

vinaymk1969

ನವದೆಹಲಿ: ಮೈ, ಕೈ ಮೇಲೆ ಏಳುವ ಗಂಧೆಗಳು ಕೋವಿಡ್​-19ರ ಲಕ್ಷಣಗಳು ಎಂಬುದನ್ನು ತುಂಬಾ ಹಿಂದೆಯೇ ಒಪ್ಪಿಕೊಳ್ಳಲಾಗಿದೆ. ಆದರೆ ಈಗ ಬಾಯಿಹುಣ್ಣು, ದಂತಕುಳಿಯಿಂದ ಬಾಯಲ್ಲಿ ಆಗುವ ಗುಳ್ಳೆಗಳು ಕೂಡ ಕೋವಿಡ್​-19ರ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.

ಕೋವಿಡ್​-19 ಸೋಂಕಿತರನ್ನು ಪರೀಕ್ಷಿಸಿರುವ ಅಮೆರಿಕದ ಚರ್ಮರೋಗ ತಜ್ಞ ಡಾ. ಮೈಕೆಲ್​ ಗ್ರೀನ್​ ಕರೊನಾ ಸೋಂಕಿತರಲ್ಲಿ ಬಾಯಿಹುಣ್ಣು, ದಂತಕುಳಿಗಳಿಂದ ಬಾಯಲ್ಲಿ ಆಗುವ ಗುಳ್ಳೆಗಳು ಕಂಡು ಬಂದಿದೆ. ಹಾಗಾಗಿ ಈ ಸಮಸ್ಯೆಗಳು ಕೋವಿಡ್​-19ರ ಲಕ್ಷಣಗಳು ಎಂದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಿಡುಬು ರೋಗ ಹಾಗೂ ಕಾಲು ಮತ್ತು ಬಾಯಿ ರೋಗದ ವೈರಾಣು ಸೋಂಕಿನ ಸಂದರ್ಭದಲ್ಲಿ ಲೋಳೆ ಪೊರೆ (ಮ್ಯೂಕಸ್​ ಮೆಂಬರೇನ್​) ಮೇಲೆ ಸಣ್ಣ ಸಣ್ಣ ಗಂಧೆಗಳು ಆಗುವುದು ಸಾಮಾನ್ಯ. ಹಾಗಾಗಿ ಲೋಳೆ ಪೊರೆ ಮೇಲೆ ಗಂಧೆಗಳು ಏಳುವುದು ಕೂಡ ವೈರಾಣು ಸೋಂಕಿನ ಲಕ್ಷಣ ಎಂದು ಭಾವಿಸಲಾಗುತ್ತದೆ. ಹಾಗಾಗಿ ಅದು ಕೂಡ ಕೋವಿಡ್​-19ರ ಲಕ್ಷಣ ಆಗುತ್ತದೆ ಎಂದು ವಿವರಿಸಿದ್ದಾರೆ.

ಮ್ಯಾಡ್ರಿಡ್​ನ ವೈದ್ಯಕೀಯ ಕಾಲೇಜೊಂದರ ವೈದ್ಯ ಜುವಾನ್​ ಜಿಮೆನೆಜ್​ ಕೌಹೆ ನೇತೃತ್ವದ ಸ್ಪೇನ್​ನ ಚರ್ಮರೋಗತಜ್ಞರು ಮತ್ತು ಸಂಶೋಧಕರ ತಂಡ ಕೋವಿಡ್​-19 ಮತ್ತು ಚರ್ಮದ ಮೇಲೆ ಗಂಧೆಗಳು ಎದ್ದಿದ್ದ 21 ರೋಗಿಗಳನ್ನು ಆಮೂಲಾಗ್ರವಾಗಿ ತಪಾಸಣೆಗೆ ಒಳಪಡಿಸಿದ್ದರು. ಇವರಲ್ಲಿ ಆರು ಜನರಿಗೆ (ಶೇ.29) ಬಾಯಿಹುಣ್ಣು ಇತ್ತು. ಇವರೆಲ್ಲರೂ 40ರಿಂದ 69 ವರ್ಷ ವಯೋಮಿತಿಯವರಾಗಿದ್ದು, ಇವರಲ್ಲಿ 4:6 ಜನರು ಮಹಿಳೆಯರಾಗಿದ್ದರು ಎಂದು ಹೇಳಲಾಗಿದೆ.

ಕೋವಿಡ್​-19ರ ಇತರೆ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುವ ಎರಡು ದಿನಗಳ ಮೊದಲಿನಿಂದ ಹಿಡಿದು 24 ದಿನಗಳವರೆಗೆ ಯಾವಾಗ ಬೇಕಾದರೂ ಬಾಯಿಹುಣ್ಣು ಕಾಣಿಸಿಕೊಳ್ಳಲು ಆರಂಭವಾಗಬಹುದು. ರೋಗಿ ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಯಾವುದೇ ಔಷಧದಿಂದಲೂ ಆದ ಅಡ್ಡಪರಿಣಾಮ ಇದಾಗಿರಲಿಲ್ಲ. ಹಾಗಾಗಿ, ಬಾಯಲ್ಲಿ ಕೆಂಪುವರ್ಣದ ಗಂಧೆಗಳು ಕಾಣಿಸಿಕೊಳ್ಳುವುದು ಕರೊನಾ ಸೋಂಕಿನ ಲಕ್ಷಣ ಎಂದು ಖಚಿತವಾಗಿ ಹೇಳಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.