ಚಿಕಿತ್ಸೆ ಫಲಿಸದೆ ಮೃತಪಟ್ಟ ಚೀತಾ ಗೌರವ್​ 
ನ್ಯೂಸ್

ಕುನೋದಲ್ಲಿ ಮತ್ತೊಂದು ಆಘಾತ: ನಮೀಬಿಯಾದಿಂದ ಬಂದಿದ್ದ ಚೀತಾ ‘ಗೌರವ್​’ ಚಿಕಿತ್ಸೆ ಫಲಿಸದೆ ಸಾವು | Cheetah Gaurav

ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ 10 ವರ್ಷಕ್ಕೂ ಹೆಚ್ಚು ವಯಸ್ಸಿನ ಚೀತಾ ‘ಗೌರವ್​ ಚಿಕಿತ್ಸೆ ಫಲಿಸದೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ. ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬರಲಿದೆ.

ಮಂಜುನಾಥ್ ಹಾಲವರ್ತಿ

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಗೌರವ್​ ಸಾವು

ತೀವ್ರ ನಿಶ್ಶಕ್ತಿ, ನಿರ್ಜಲೀಕರಣದಿಂದ ಮೃತಪಟ್ಟ ಚೀತಾ

ಗೌರವ ಸಾವಿನ ಬಳಿಕ ಕುನೋದಲ್ಲಿ ಉಳಿದ 51 ಚೀತಾಗಳು

Cheetah Gaurav: ಭಾರತದಲ್ಲಿ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಹಿನ್ನಡೆಯಾಗಿದೆ. ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ 10 ವರ್ಷಕ್ಕೂ ಹೆಚ್ಚು ವಯಸ್ಸಿನ ಚೀತಾ ಗೌರವ್​ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಗೌರವ ಕೊನೆಯುಸಿರೆಳೆದಿದೆ.

ಕುನೋ ರಾಷ್ಟ್ರೀಯ ಉದ್ಯಾನ ಹೊರಡಿಸಿರುವ ಅಧಿಕೃತ ಪ್ರಕಟಣೆ ಪ್ರಕಾರ, ಸೆಪ್ಟೆಂಬರ್ 12ರಂದು ಗೌರವ್​ ಅರಣ್ಯದಲ್ಲಿ ದುರ್ಬಲ ಹಾಗೂ ನಿಶ್ಶಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅದನ್ನು ರಕ್ಷಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ತೀವ್ರ ನಿಶ್ಶಕ್ತಿ, ದೇಹದಲ್ಲಿ ನೀರಿನ ಕೊರತೆ ಹಾಗೂ ಸ್ನಾಯು ಹಾನಿಯ ಲಕ್ಷಣಗಳು ಕಂಡುಬಂದಿದ್ದವು.

ಚಿಕಿತ್ಸೆ ಫಲಿಸದೆ ಗೌರವ್ ಸಾವು

ಗೌರವ್‌ಗೆ ತಕ್ಷಣ ಚಿಕಿತ್ಸೆ ನೀಡಿ, ಹೆಚ್ಚಿನ ನಿಗಾಗಾಗಿ ಪಾಲ್ಪುರದ ಕ್ವಾರಂಟೈನ್ ಬೋಮಾಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ದೀರ್ಘಕಾಲದ ಕಾಯಿಲೆ ಇರಬಹುದೆಂದು ಶಂಕಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಂಜೆ ಗೌರವ್ ಮೃತಪಟ್ಟಿದೆ. ಸಾವಿನ ನಿಖರ ಕಾರಣ ಪೋಸ್ಟ್‌ಮಾರ್ಟಂ ಹಾಗೂ ಸಂಗ್ರಹಿಸಿರುವ ಮಾದರಿಗಳ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನದ ಉಪ ನಿರ್ದೇಶಕ ಆರ್. ತಿರುಕುರುಳ್ ತಿಳಿಸಿದ್ದಾರೆ.

ಕುನೋದಲ್ಲಿ ಈಗ 51 ಚೀತಾಗಳು

ಗೌರವ್ ಸಾವಿನ ಬಳಿಕ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 51 ಚೀತಾಗಳು ಉಳಿದಿವೆ. ಇವರಲ್ಲಿ 36 ಚೀತಾಗಳು ಭಾರತದಲ್ಲೇ ಜನಿಸಿದವು. ಸದ್ಯ 16 ಚೀತಾಗಳು ಅರಣ್ಯದಲ್ಲಿ ಸ್ವತಂತ್ರವಾಗಿ ಓಡಾಡುತ್ತಿದ್ದು, ಉಳಿದವು ವಿವಿಧ ರೀತಿಯ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಗಣೇಶ ಹೋದ ಬೆನ್ನಲ್ಲೇ ಜೋಕುಮಾರನ ಎಂಟ್ರಿ: ಉತ್ತರ ಕರ್ನಾಟಕದಲ್ಲಿ ಏಳು ದಿನಗಳ ವಿಶಿಷ್ಟ ಆಚರಣೆ | Jokumara Swamy

ಇನ್ನು ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿರುವ ನಾಲ್ಕು ಚೀತಾಗಳನ್ನು ಸೇರಿಸಿದರೆ, ದೇಶದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ ಇದೀಗ 55ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.(ಏಜೆನ್ಸೀಸ್​)