Meghalaya honeymoon case : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ತುಂಬಾ ದಿನಗಳ ಬಳಿಕ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಅದೇನೆಂದರೆ, ಎ1 ಆರೋಪಿ ಹಾಗೂ ಕೊಲೆಯಾದ ರಾಜಾ ರಘುವಂಶಿಯ ಪತ್ನಿ ಸೋನಂ ಬಳಿ ಇತ್ತೀಚೆಗೆ ಮತ್ತೊಂದು ಮಾಂಗಲ್ಯ ಸರ ಪತ್ತೆಯಾಗಿದೆ.
ಸೋನಂ ಅವರ ಬ್ಯಾಗಿನಲ್ಲಿ ಪೊಲೀಸರು ಎರಡು ಮಂಗಳಸೂತ್ರಗಳನ್ನು ಪತ್ತೆ ಮಾಡಿದ್ದಾರೆ. ಮದುವೆಯ ಸಮಯದಲ್ಲಿ ಸೋನಂ ಪತಿ ರಾಜಾ ರಘುವಂಶಿ ಅವರ ಕುಟುಂಬವು ಅವರಿಗೆ ಒಂದು ಮಂಗಳಸೂತ್ರವನ್ನು ನೀಡಿದರೆ, ಇನ್ನೊಂದು ಮಂಗಳಸೂತ್ರದ ಬಗ್ಗೆ ಇದೀಗ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಸೋನಂ ಅವರ ಬ್ಯಾಗಿನಲ್ಲಿರುವ ಎರಡನೇ ಮಂಗಳಸೂತ್ರವನ್ನು ಕೊಟ್ಟವರು ಯಾರು? ಆಕೆಯ ಗೆಳೆಯ ರಾಜ್ ಕುಶ್ವಾಹ್ ಕೊಟ್ಟಿದ್ದಾನಾ? ರಾಜ್ ಈಗಾಗಲೇ ಸೋನಂಳನ್ನು ಮದುವೆಯಾಗಿದ್ದಳಾ? ಅಥವಾ ಶಿಲ್ಲಾಂಗ್‌ನಿಂದ ಹಿಂದಿರುಗಿದ ನಂತರ ತನ್ನ ಗೆಳೆಯ ರಾಜ್‌ನನ್ನು ಮದುವೆಯಾದಳಾ? ಅಥವಾ ಮತ್ತೆ ಮದುವೆಯಾಗುವ ಯೋಜನೆಯೊಂದಿಗೆ ಸೋನಂ ಮಂಗಳಸೂತ್ರ ಖರೀದಿಸಿದ್ದಳಾ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ವಿಚಾರವಾಗಿ ಪೊಲೀಸರು ಸೋನಂರನ್ನು ವಿಚಾರಣೆ ನಡೆಸಲಿದ್ದಾರೆ.
ಸೋನಂ ಬ್ಯಾಗಿನಲ್ಲಿ ಎರಡು ಮಂಗಳಸೂತ್ರ ಪತ್ತೆಯಾಗಿರುವ ವಿಚಾರವಾಗಿ ರಾಜಾ ರಘುವಂಶಿಯವರ ಅಣ್ಣ ವಿಪಿನ್ ಪ್ರತಿಕ್ರಿಯಿಸಿದ್ದಾರೆ. ಸೋನಂ, ರಘುವಂಶಿಯನ್ನು ಕೊಲೆ ಮಾಡಿದ ನಂತರ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ಆಕೆಯ ಗೆಳೆಯ ರಾಜ್ ಕುಶ್ವಾಹ್ನನ್ನು ಸೋನಂ ರಹಸ್ಯವಾಗಿ ಮದುವೆಯಾಗಿರಬಹುದು ಎಂದು ಶಂಕಿಸಿದ್ದಾರೆ.
ಇದೇ ವೇಳೆ ಸೋನಂ ಸಹೋದರ ಗೋವಿಂದ್ ಅವರನ್ನು ವಿಪಿನ್ ಟೀಕಿಸಿದರು. ಗೋವಿಂದ್ ತಮ್ಮ ಸಹೋದರಿ ಸೋನಂ ಅವರನ್ನು ಭೇಟಿಯಾಗಲು ಬಯಸುವುದಾಗಿ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಅವರು ಸೋನಂಳನ್ನು ಭೇಟಿಯಾಗಬಹುದು, ಬಹುಶಃ ವಕೀಲರ ಮೂಲಕ ಆಕೆಯನ್ನು ಉಳಿಸಲು ಪ್ರಯತ್ನಿಸುತ್ತಿರಬಹುದು. ಆದರೆ, ಇದನ್ನೆಲ್ಲ ಮಾಡಲು ಬಯಸಿದರೆ, ತನ್ನ ಸಹೋದರಿಯ ಬಂಧನದ ನಂತರ ಅವನು ನಮ್ಮ ಮನೆಗೆ ಏಕೆ ಬಂದನು? ನಮ್ಮ ಕುಟುಂಬದ ಭಾವನೆಗಳೊಂದಿಗೆ ಆಟವಾಡುತ್ತಿರುವಂತೆ ಕಾಣುತ್ತಿದೆ? ಸೋನಂ ಮತ್ತು ಅವರ ಕುಟುಂಬ ನಿರಂತರವಾಗಿ ನಮ್ಮಗೆ ಮೋಸ ಮಾಡುತ್ತಿದೆ ಎಂದು ವಿಪಿನ್ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಂ ಮೇ 11 ರಂದು ವಿವಾಹವಾದರು. ಅದೇ ತಿಂಗಳು 20 ರಂದು ಅವರು ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್ ಬದಲಾಯಿಸಿದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅವರು ಕಣ್ಮರೆಯಾದ 11 ದಿನಗಳ ನಂತರ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದರು. ಅವರ ದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಕೊಲೆ ಎಂದು ಶಂಕಿಸಿದರು. ಸೋನಂ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.
ಸೋನಂ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಂ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿಕ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಂ, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದುಬಂತು. ಸೋನಮ್, ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು.
ಅಂದಹಾಗೆ, ಸೋನಂ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ರಾಜ್ ಕುಶ್ವಾಹನನ್ನು ಪ್ರೀತಿಸುತ್ತಿದ್ದಳು. ಆದರೆ, ಆ ಬಗ್ಗೆ ಹಿರಿಯರಿಗೆ ಹೇಳುವ ಧೈರ್ಯ ಇರಲಿಲ್ಲ. ಆದ್ದರಿಂದ, ಅವಳು ರಾಜಾ ರಘುವಂಶಿಯನ್ನು ಮದುವೆಯಾದಳು. ಬಳಿಕ ತಮ್ಮ ಪ್ರೇಮಕ್ಕೆ ರಘುವಂಶಿ ಅಡ್ಡಿಯಾಗುತ್ತಾನೆಂದು ಭಾವಿಸಿ, ಆತನನ್ನು ಕೊಲ್ಲಲು ಸೋನಂ ಮತ್ತು ಕುಶ್ವಾಹ ಸಂಚು ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು, ಸುಪಾರಿ ಹಂತಕರನ್ನು ಏರ್ಪಡಿಸಿದರು. ಸೋನಂ ಮೇಘಾಲಯಕ್ಕೆ ಹನಿಮೂನ್ ಪ್ಲಾನ್ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಂ ಜೊತೆ ಸಂಪರ್ಕದಲ್ಲಿದ್ದನು. ಯೋಜನೆಯ ಪ್ರಕಾರ, ಸೋನಂ, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದರು. ನಂತರ, ಸೋನಂ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಈ ನಡುವೆ ಸೋನಂ, ಪೊಲೀಸರಿಗೆ ರಘುವಂಶಿಯನ್ನು ತಾನು ಕೊಂದಿಲ್ಲ, ಬದಲಿಗೆ ಯಾರೋ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದಳು. ಆದರೆ, ತನಿಖೆಯಲ್ಲಿ ಆಕೆಯ ಕಳ್ಳಾಟ ಎಲ್ಲವು ಬಯಲಾಯಿತು. ಕೊನೆಗೂ ಸೋನಂ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಳು.
ರಾಜಾ ರಘುವಂಶಿ ಹತ್ಯೆಗೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ಬಂಧಿಸಿರುವ ಎಂಟು ಜನರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. (ಏಜೆನ್ಸೀಸ್)